ಕಿನಕಹಳ್ಳಿಯಲ್ಲಿ ಅಶುದ್ಧ ನೀರು ಪೂರೈಕೆ

Oplus_0
Oplus_0
Published on

ಯಳಂದೂರು : ತಾಲೂಕಿನ ಕಿನಕಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಹೊಸ ಬಡಾವಣೆಯಲ್ಲಿ ಕಳೆದ ಹಲವು ದಿನಗಳಿಂದ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಆತಂಕ ಶುರುವಾಗಿದ್ದು, ಎಲ್ಲ ಕಡೆ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗದ ಭೀತಿ ಇಲ್ಲೂ ಆವರಿಸಿದೆ.

ಶುದ್ಧವಾದ ನೀರನ್ನು ಪೂರೈಕೆ ಮಾಡಿ ಎಂದು ಗ್ರಾಮಸ್ಥರು ಪಂಚಾಯಿತಿಗೆ ಎಡತಾಕುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹಾಗಾಗಿ ಗ್ರಾಮಸ್ಥರು ಶುದ್ಧ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಿನಕಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಹೊಸ ಬಡಾವಣೆ ಹಾಗೂ ಉಪ್ಪಾರ ಜನಾಂಗದ ಬಡಾವಣೆಯೂ ಸೇರಿದಂತೆ ಸುಮಾರು 130 ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿದೆ. ಈ ನೀರು ಕಳೆದ ಹಲವು ದಿನಗಳಿಂದ ಪೂರೈಕೆಯಾಗುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಒಳಗಾಗಿದ್ದು, ಸ್ಥಳೀಯ ಗ್ರಾಪಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರನ್ನು ಒಂದು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಹಿಡಿದುಕೊಂಡು ಅಧಿಕಾರಿಗಳಿಗೆ ತೋರಿಸಿದ್ದು, ತಾಲೂಕು ಪಂಚಾಯಿತಿ ಇಒಗೂ ಸಹ ದೂರು ನೀಡಲಾಗಿದೆ. ಇದನ್ನು ಪರಿಶೀಲಿಸಿದ ಅಧಿಕಾರಿಗಳು ಇದು ಕುಡಿಯಲು ಯೋಗ್ಯವಲ್ಲದ ನೀರು ಎಂದು ದೃಢಪಡಿಸಿದ್ದಾರೆ. ಈ ನೀರನ್ನು ಕುಡಿಯಬಾರದು ಎಂದೂ ಸಹ ತಿಳಿಸಲಾಗಿದೆ. ಆದರೆ ಬದಲಿ ನೀರಿನ ವ್ಯವಸ್ಥೆಯನ್ನು ತಕ್ಷಣ ಮಾಡದ ಪರಿಣಾಮ ಜನರು ಅನಿವಾರ್ಯವಾಗಿ ಈ ನೀರನ್ನೇ ಕುಡಿಯುತ್ತಿದ್ದಾರೆ. ಇದರಿಂದ ಜನರಿಗೆ ಅನಾರೋಗ್ಯದ ಸಮಸ್ಯೆ ಎದುರಾಗುವ ಆತಂಕವಿದ್ದು, ಇದರಿಂದ ಪ್ರಾಣಾಪಾಯ ಸಂಭವಿಸಿದರೆ ನೇರವಾಗಿ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕರೆ ಸ್ವೀಕರಿಸದ ಅಧಿಕಾರಿಗಳು:
ತಾಲೂಕಿನ ಅಗರ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಷಾ, ಕುಡಿಯುವ ನೀರು ಪೂರೈಕೆ ಹಾಗೂ ತಾಲೂಕು ಪಂಚಾಯಿತಿ ಇಒ ಉಮೇಶ್ ಅಧಿಕಾರಿಗಳ ವರ್ಗಕ್ಕೆ ಸಾರ್ವಜನಿಕರು ಫೋನ್ ಮಾಡಿದರೂ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕರೆ ಮಾಡಿದ ವ್ಯಕ್ತಿಗಳಿಗೂ ಮತ್ತೆ ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿಲ್ಲ. ಅವರಿಗೆ ನೀಡಿರುವ ಸರ್ಕಾರಿ ಸಿಮ್‌ನಲ್ಲಿ ಮೇಲಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಕರೆಗಳನ್ನು ಮಾತ್ರ ಸ್ವೀಕರಿಸುತ್ತಾರೆ. ಆದರಲ್ಲೂ ಸರ್ಕಾರಿ ರಜೆ ದಿನಗಳಲ್ಲೂ ತುರ್ತು ಸಮಯದಲ್ಲಿ ಜನರು ಯಾರನ್ನು ಸಂಪರ್ಕಿಸಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿದೆ.
ಇಬ್ಬರು ಅಧಿಕಾರಿಗಳು ಸ್ಥಳೀಯವಾಗಿ ಜಿಲ್ಲಾ ವ್ಯಾಪ್ತಿ ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಿಲ್ಲ. ಪಿಡಿಒ ಉಷಾ ಮಾಂಬಳ್ಳಿ ಹಾಗೂ ಅಗರ ಎರಡು ಗ್ರಾಮ ಪಂಚಾಯಿತಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ತಾ.ಪಂ. ಇಒ ಉಮೇಶ್ ಯಳಂದೂರು ಹಾಗೂ ಹನೂರು ತಾಲೂಕು ಪಂಚಾಯಿತಿಯಲ್ಲೂ ಎರಡು ಕಡೇ ಕರ್ತವ್ಯ ಮಾಡುತ್ತಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯ ವಿಳಂಬವಾಗುತ್ತಿದೆ. ಜನರ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳು ಯಾವುದೇ ಗಮನ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಕಾಯಿಲೆ ಬರುವ ಆತಂಕ:
ಗ್ರಾಮದ ಮನೆಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ತೊಂಬೆಯ ಸುತ್ತಲೂ ಗಿಡಗಂಟಿಗಳು, ಪಾಚಿಕಟ್ಟಿ, ಪೈಪ್‌ಲೈನ್ ಸುತ್ತಲೂ ತ್ಯಾಜ್ಯ ಸಂಗ್ರಹವಾಗಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರಿನ ತೊಂಬೆಗಳನ್ನು ಸ್ವಚ್ಛಗೊಳಿಸಿ ವರ್ಷಗಳೆ ಕಳೆದಿವೆ. ಹಳೆ ತೊಂಬೆಗಳು ಪಾಚಿಕಟ್ಟಿಕೊಂಡಿವೆ. ಇದರಲ್ಲಿ ಕ್ರಿಮಿಕೀಟಗಳು ಇರಬಹುದೆಂಬ ಶಂಕೆ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕಿದೆ.

ಜಲಜೀವನ್ ಯೋಜನೆ ನಿರುಪಯುಕ್ತ:
ತಾಲೂಕಿನ ಕಿನಕಹಳ್ಳಿ ಗ್ರಾಮದಲ್ಲಿ ಪ್ರತಿ ಮನೆಗೆ ಜಲ ಜೀವನ್ ಯೋಜನೆ ನಲ್ಲಿ ಮೂಲಕ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಇದು ಕಾವೇರಿ ನೀರಲ,್ಲ ಬದಲಿಗೆ ಇಲ್ಲಿನ ಕೊಳವೆ ಬಾವಿಯ ನೀರನ್ನೇ ಟ್ಯಾಂಕ್‌ಗೆ ತುಂಬಿಸಿ ಪೂರೈಕೆ ಮಾಡುತ್ತಿದ್ದಾರೆ. ಈ ನೀರು ದಿನಕ್ಕೆ ಒಂದು ಗಂಟೆಗಳ ಕಾಲ ಮಾತ್ರ ಬಿಡಲಾಗುತ್ತಿದೆ. ಅದು ಇಲ್ಲಿನ ನಿವಾಸಿಗಳಿಗೆ ಸಾಕಾಗುತ್ತಿಲ್ಲ. ಕೆಲವು ಮನೆಗಳಿಗೆ ನೀರು ಏರುವುದೇ ಇಲ್ಲ. ನಲ್ಲಿ ಸಂಪರ್ಕ ಕೊಟ್ಟಿರುವ ಮುಖ್ಯ ಪೈಪ್‌ನಿಂದ ಕೆಲವು ಮನೆಗಳಲ್ಲಿ ನೀರು ಜಿನುಗುತ್ತಿದೆ. ಇವರು ಕೂಡ ಪಂಚಾಯಿತಿಗೆ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.

ತಾಲೂಕಿನ ಕಿನಕಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿಯ ಮೂಲಕ ಪೂರೈಕೆಯಾಗುತ್ತಿದೆ. ನೀರನ್ನು ಪರೀಕ್ಷೆ ಮಾಡಿಸಿದ ಮೇಲೆ ಜನರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದು ಬಂದಿದ್ದು, ತಕ್ಷಣ ಇದನ್ನು ಸ್ಥಗಿತಗೊಳಿಸಲಾಗಿದೆ. ಜಲ ಜೀವನ್ ಯೋಜನೆಯಲ್ಲಿ ಮನೆ ಮನೆಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರಿನನ್ನು ಪೂರೈಕೆ ಮಾಡಲಾಗುತ್ತಿದೆ. ಆದರೂ ಈ ನೀರು ಸಾಲುತ್ತಿಲ್ಲ ಎನ್ನುತ್ತಿರುವ ಬಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು.ಶ್ರೀನಿವಾಸ್ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯಳಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net