

ಯಳಂದೂರು: ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಗ್ರಾಮದ ನೂರಾರು ಜನರಿಗೆ ನಂಬಿಸಿ 25 ಲಕ್ಷ ರೂ. ಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ಪಟ್ಟಣ ಪೊಲೀಸ್ ಠಾಣೆ ಬಳಿ ಜಮಾಯಿಸಿ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿದರು.
ಉಪ್ಪಿನಮೋಳೆ ಗ್ರಾಮದ ಸರಸ್ವತಿ ಹಾಗೂ ಚೌಡಮ್ಮ ಅವರು ಗ್ರಾಮದ ನೂರಾರು ಮಂದಿಯಿಂದ ಹಣವನ್ನು ದ್ವಿಗುಣ ಮಾಡುವ ಆಮಿಷವೊಡ್ಡಿ ಲಕ್ಷಾಂತರ ರೂ. ಹಣ ಕಟ್ಟಿಸಿಕೊಂಡು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಕೆಲವರ ಹತ್ತಿರ ಹಣ ಕಟ್ಟಿಸಿಕೊಂಡು ಒಂದೇ ವರ್ಷಕ್ಕೆ ಎರಡು ಪಟ್ಟು ಹಣ ನೀಡುವ ಮೂಲಕ ಗ್ರಾಮಸ್ಥರ ವಿಶ್ವಾಸ ಗಳಿಸಿದರು. ಇದನ್ನು ನಂಬಿದ ನೂರಾರು ಜನರು ಹಣವನ್ನು ಇವರಿಗೆ ನೀಡಿದ್ದಾರೆ. ಹಣ ನೀಡಿರುವ ಬಗ್ಗೆ ಸರಸ್ವತಿ ಹಾಗೂ ಚೌಡಮ್ಮ ಕೇಲವ ಒಂದು ಬಿಳಿ ಚೀಟಿಯಲ್ಲಿ ಬರೆದುಕೊಟ್ಟಿದ್ದಾರೆ. ನಂತರ ಇವರು ಸಂಗ್ರಹಿಸಿದ ಹಣದಿಂದ ಐಷಾರಾಮಿ ನಡೆಸುತ್ತಿದ್ದರಲ್ಲದೇ, ತಮ್ಮ ಸ್ವಂತಕ್ಕೆ ಚಿನ್ನಾಭರಣ, ಮನೆ, ಆಸ್ತಿಯನ್ನು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅನುಮಾನಗೊಂಡ ಕೆಲ ಗ್ರಾಮಸ್ಥರು ತಮ್ಮ ಹಣವನ್ನು ವಾಪಸ್ ನೀಡುವಂತೆ ಒತ್ತಡ ಹೇರಲಾರಂಭಿಸಿದಾಗ ಇವರಿಬ್ಬರು ತಮ್ಮ ಬಳಿ ಈಗ ಹಣ ಇಲ್ಲ ಎಂದು ಏನೇನೋ ಸಬೂಬು ಹೇಳಿ ವಾಪಸ್ ಕಳುಹಿಸಿದ್ದಾರೆ. ಇದರಿಂದ ನೊಂದ ನೂರಾರು ಗ್ರಾಮಸ್ಥರು ಶನಿವಾರ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಜಮಾವಣೆಗೊಂಡು ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಬಳಿ ಅವಲತ್ತುಕೊಂಡಿದ್ದಾರೆ.
ನಂತರ ಪೊಲೀಸರು ಸರಸ್ವತಿ ಹಾಗೂ ಚೌಡಮ್ಮ ಅವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು. ವೇಳೆ ಇವರಿಬ್ಬರೂ ನಮ್ಮ ಬಳಿ ಈಗ ಹಣವಿಲ್ಲ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲರ ಹಣವನ್ನೂ ವಾಪಸ್ ಮಾಡುವ ಭರವಸೆ ನೀಡಿದರು ಎನ್ನಲಾಗಿದೆ. ನಂತರ ಗ್ರಾಮಸ್ಥರು ಅಲ್ಲಿಂದ ವಾಪಸಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಚೌಡಮ್ಮ ಸರಸ್ವತಮ್ಮ ಎಂಬ ಇಬ್ಬರು ಮಹಿಳೆಯರು ಚೀಟಿ ಹಣವನ್ನು ಕಟ್ಟಿಸಿಕೊಂಡು ಮೂರು ಜನ ಮಹಿಳೆಯರಿಗೆ 25 ಲಕ್ಷ ರೂ.ಗಳು ವಂಚಿಸಿದ್ದಾರೆ ಎಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿಕೊಂಡು ನೋಟಿಸ್ ನೀಡಿ ಮುಂದಿನ ಕ್ರಮವಹಿಸಲಾಗಿದೆ.ಹನುಮಂತ ಉಪ್ಪಾರಸಬ್ ಇನ್ಸ್ಪೆಕ್ಟರ್, ಯಳಂದೂರು ಪೊಲೀಸ್ ಠಾಣೆ