

ಯಳಂದೂರು: ತಾಲೂಕು ಆಡಳಿತದ ವತಿಯಿಂದ ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಒಕ್ಕಲಿಗ ಸಮುದಾಯದ ಮುಖಂಡರು ಮಾತನಾಡಿ, ಜಯಂತಿ ಆಚರಿಸುವ 15 ದಿನ ಮುಂಚಿತವಾಗಿಯೇ ಸಭೆ ಕರೆಯಬೇಕು, ಇದರಿಂದ ಸಿದ್ಧತೆಗೆ ಕಾಲಾವಕಾಶ ದೊರೆಯುತ್ತದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು, ಪೂರ್ವ ತಯಾರಿಗೆ ಸಮಯ ಲಭಿಸುತ್ತದೆ. ಈ ಬಗ್ಗೆ ಪ್ರತಿ ವರ್ಷದ ಸಭೆಯಲ್ಲೂ ಮನವರಿಕೆ ಮಾಡಿಕೊಡಲಾಗುತ್ತದೆ. ಆದರೂ ಅಧಿಕಾರಿಗಳು ಜಯಂತಿ ಆಚರಣೆಗೆ ಎರಡು, ಮೂರು ದಿನ ಬಾಕಿ ಇರುವಾಗ ಸಭೆ ಕರೆಯುತ್ತಾರೆ. ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ತಾಲೂಕು ಆಡಳಿತ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗೈರಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಗ್ರೇಡ್-2 ತಹಸೀಲ್ದಾರ್ ಶಿವರಾಜು ಪ್ರತಿಕ್ರಿಯಿಸಿ, ಮುಂದಿನ ಸಭೆಗಳನ್ನು ಕನಿಷ್ಠ ಒಂದು ವಾರ ಮುಂಚೆ ಕರೆದು ಚರ್ಚಿಸಲಾಗುವುದು ಎಂದು ಮನವರಿಕೆ ಮಾಡಿಕೊಟ್ಟ ಮೇಲೆ ಸಭೆ ಮುಂದುವರಿಯಿತು. ಜೂ.27ರಂದು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಲಾಯಿತು. ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಸೆಸ್ಕ್ ಎಇಇ ನಿಂಗರಾಜು, ಪಿಎಸ್‌ಐ ಹನುಮಂತ ಉಪ್ಪಾರ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ರಾಜೇಗೌಡ, ಜಿಲ್ಲಾ ನಿರ್ದೇಶಕ ವಡಗೆರೆ ಕುಮಾರ್, ಡಿ.ಸಿ.ಬಾಬು, ಬಿ.ವಿ.ರಾಜುಗೌಡ, ಸಿದ್ದಲಿಂಗೇಗೌಡ ಇತರರು ಇದ್ದರು.