ಅಭಿವೃದ್ಧಿಗೆ ಪ್ರಭಾರ ಅಧಿಕಾರ ಮಾರಕ

oppo_0
oppo_0
Published on

ಯಳಂದೂರು: ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ಗಾದೆ ಮಾತಿನಂತೆ ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳು ನೆಪಮಾತ್ರಕ್ಕೆ ನೇಮಕವಾಗಿ ಮತ್ತೊಂದು ಕಡೆ ಕೆಲಸ ಮಾಡುವ ಮೂಲಕ ತಾಲೂಕಿನ ಕೆಲಸಗಳು ನನೆಗುದಿಗೆ ಬೀಳುತ್ತಿದ್ದು, ಸಾರ್ವಜನಿಕರು ದಿನನಿತ್ಯ ಕಚೇರಿಗಳನ್ನು ಅಲೆಯುವಂತಾಗಿದೆ.

ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳನ್ನು ಎರಡು ಕಡೆಗಳಲ್ಲಿ ಪ್ರಭಾರವಾಗಿ ನೇಮಕ ಮಾಡಿರುವ ಪರಿಣಾಮ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ಸಾಗದೇ ಇವುದರಿಂದ ಇದು ತಾಲೂಕಿನ ಅಭಿವೃದ್ಧಿಗೂ ಮಾರಕವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಅತ್ಯಂತ ಚಿಕ್ಕ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ತಾಲೂಕು ಕೇಂದ್ರದಲ್ಲಿ ಕಂದಾಯ ಇಲಾಖೆ, ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಜೆಇ, ಆರೋಗ್ಯ ಇಲಾಖೆ ತಾಲೂಕು ಆರೋಗ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ, ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ, ಪಶು ಸಂಗೋಪನೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಪ್ರಮುಖ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಪ್ರಭಾರವಾಗಿ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರ ಕೆಲಸಗಳು ಕುಂಟುತ್ತಾ ಸಾಗಿವೆ.

ಶಾಸಕರು ಹೆಚ್ಚಿನ ಆದ್ಯತೆ ನೀಡಲಿ: ಕೊಳ್ಳೇಗಾಲ ಕ್ಷೇತ್ರ ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರ ಸೇರಿ ಜಿಲ್ಲೆಯ 5 ತಾಲೂಕಿನಲ್ಲಿ 3 ತಾಲೂಕು ಕೇಂದ್ರಗಳನ್ನು ಒಳಗೊಂಡಿದೆ. ಆದರಲ್ಲಿ ಯಳಂದೂರು ತಾಲೂಕು ಮಾತ್ರ ಸಂಪೂರ್ಣವಾಗಿ ಕೊಳ್ಳೇಗಾಲ ಕ್ಷೇತ್ರಕ್ಕೆ ಸೇರಿದೆ ಉಳಿದ ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲೂಕು ಎರಡು ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಷೇತ್ರವು ಹಂಚಿಕೆಯಾಗಿದೆ. ಶಾಸಕರು ಕೊಳ್ಳೇಗಾಲ ಅಥವಾ ಚಾಮರಾಜನಗರ ವ್ಯಾಪ್ತಿಯ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಈ ಭಾಗದಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಅಧಿಕಾರಿಗಳ ಸಭೆ, ಸಮಾರಂಭಗಳು ನಿರಂತರವಾಗಿ ನಡೆಸುತ್ತಾರೆ. ಆದರೆ ಯಳಂದೂರು ತಾಲೂಕು ಕೇಂದ್ರದಲ್ಲಿ ಮಾತ್ರ ಜರುಗುವುದಿಲ್ಲ. ಇದರಿಂದ ತಾಲೂಕಿನ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿದೆ. ಈ ಹಿಂದೆ ಸಂಸದರಾಗಿ ಆರ್.ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಸಿಇಒ, ಎಸ್‌ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯನ್ನು ನಡೆಸಿರುವುದು ಬಿಟ್ಟರೆ ಇದುವರೆವಿಗೂ ತಾಲೂಕು ಕೇಂದ್ರದಲ್ಲಿ ಇಂತಹ ಒಂದು ಸಭೆಯೂ ನಡೆದಿಲ್ಲ. ಆದರೆ ಈ ರೀತಿಯ ಸಭೆ ನಡೆಸುವ ಪ್ರಯತ್ನವನ್ನು ಇಲ್ಲಿವರೆಗೂ ಯಾರೂ ಮಾಡಿಲ್ಲ, ಜತೆಗೆ ಕೊಳ್ಳೇಗಾಲ ಅಥವಾ ಚಾಮರಾಜನಗರ ಜಿಲ್ಲಾ ಕೇಂದ್ರಗಳಲ್ಲಿ ಕ್ಷೇತ್ರದ ಶಾಸಕರು ತಾಲೂಕಿನ ಅಧಿಕಾರಿಗಳ ಸಭೆ ಕರೆದಾಗ ಕೆಲಸ ನಡೆಸುವ ಮೂಲಕ ಕೈ ತೊಳೆದುಕೊಳ್ಳುವ ಕೆಲಸವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಡುತ್ತಿದ್ದಾರೆ. ಇದು ತಾಲೂಕಿನ ಅಭಿವೃದ್ಧಿ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.

ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲ: ತಾಲೂಕಿನ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಪಿಡಿಒಗಳು ಪ್ರಭಾರ ಇರುವುದರಿಂದ ನರೇಗಾ, ಇ-ಸ್ವತ್ತು, ಖಾತೆ ಬದಲಾವಣೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯಗಳು ಸಾಗುತ್ತಿಲ್ಲ. ತಾಲೂಕಿನಲ್ಲಿ ಕಂದಾಯ ಇಲಾಖೆ, ತಹಸೀಲ್ದಾರ್ ಪ್ರಮುಖ ಹುದ್ದೆಯೂ ಪ್ರಭಾರ ಇರುವುರಿಂದ ಕಂದಾಯ ಹಾಗೂ ತಾಲೂಕು ಆಡಳಿತ ವರ್ಗಕ್ಕೂ, ಆರ್‌ಟಿಸಿ, ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ, ಕಂದಾಯ ಸಮಸ್ಯೆ ಸೇರಿದಂತೆ ಬಹಳಷ್ಟು ತೊಂದರೆಯಾಗುತ್ತಿದೆ. ಮೀನುಗಾರಿಕೆ ಸಹಾಯಕ ನಿರ್ದೇಶಕರ ಎರಡು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಮೀನುಗಾರಿಕೆಯ ಚಟುವಟಿಕೆ ಮಂದಗತಿಯಲ್ಲಿ ಸಾಗುತ್ತಿದ್ದು, ಮೀನುಗಾರರಿಗೂ ತೊಂದರೆಯಾಗುತ್ತಿದೆ.

ಯಳಂದೂರು ತಾಲೂಕಿನಲ್ಲಿ ತಹಸೀಲ್ದಾರ್ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ ನೇಮಕ ಮಾಡುವ ಮೂಲಕ ತಾಲೂಕಿನ ಅಭಿವೃದ್ಧಿ ವಿಶೇಷ ಆದ್ಯತೆ ನೀಡಲಾಗುವುದು.ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net