ನೆಮ್ಮದಿ ಹುಡುಕುವ ಧಾವಂತದಿಂದ ಆರೋಗ್ಯ ಹಾಳು

21 yelandur 01
Published on

ಯಳಂದೂರು: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಸಹಯೋಗದೊಂದಿಗೆ ತಾಲೂಕಿನ ಗುಂಬಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೀರಭದ್ರಸ್ವಾಮಿ ಮಾತನಾಡಿ, ಯೋಗ ವಿಶ್ವಕ್ಕೆ ನಮ್ಮ ದೇಶ ನೀಡಿರುವ ಅಮೂಲ್ಯವಾದ ಕೊಡುಗೆ. ಮನುಷ್ಯ ಇಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದು, ಪ್ರತಿ ವಿಷಯದಲ್ಲೂ ನೆಮ್ಮದಿ ಹುಡುಕುವ ಧಾವಂತದಲ್ಲಿದ್ದಾನೆ. ಇದರಿಂದ ಆರೋಗ್ಯ ಹಾಳಾಗುತ್ತಿದೆ. ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಯೋಗ ಪರಿಣಾಮಕಾರಿ ಚಿಕಿತ್ಸೆ. ಇದು ಸಂಪೂರ್ಣ ಉಚಿತವಾಗಿ ಲಭಿಸುವ ಔಷಧ. ನಿತ್ಯ ಯೋಗ ಮಾಡುವುದರಿಂದ ಅನೇಕ ಕಾಯಿಲೆಗಳು ದೂರಾಗಿ ಒತ್ತಡ ರಹಿತ ಜೀವನ ನಡೆಸಬಹುದಾಗಿದೆ ಎಂದರು.

ಮುಖ್ಯ ಶಿಕ್ಷಕ ನಿಂಗೇಗೌಡ ಮಾತನಾಡಿ, ದೈಹಿಕ ಆರೋಗ್ಯ ಹಾಗೂ ಮನಸ್ಸಿನ ಪ್ರಫುಲ್ಲತೆಗೆ ಯೋಗ ಮದ್ದು. ಹಲವು ರಾಷ್ಟ್ರಗಳು ಇದನ್ನು ಸ್ವೀಕರಿಸಿದ್ದು, ಯೋಗಕ್ಕೆ ಇಡೀ ವಿಶ್ವವೇ ಮನಸೋತಿದೆ. ಯೋಗದಿಂದ ಸ್ವಸ್ಥ ಜೀವನ ನಡೆಸಬಹುದು ಎಂಬುದು ಇಂಬುದನ್ನುವಿಶ್ವವೇ ಮನಗಂಡಿದೆ ಎಂದರು.

ಪಟ್ಟಣ ಹಾಗೂ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆ ಸೇರಿದಂತೆ ವಿವಿಧೆಡೆ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಯೋಗ ದಿನದ ನಿಮಿತ್ತ ಸರ್ಕಾರಿ ಆದೇಶದಂತೆ ಶಾಲೆಗಳಲ್ಲಿ ಬೆಳಗಿನ ತರಗತಿಗಳನ್ನು ಮಾತ್ರ ನಡೆಸಲಾಯಿತು. ಗುಂಬಳ್ಳಿ ಗ್ರಾಪಂ ಅಧ್ಯಕ್ಷೆ ಮೀನಾ, ದೈಹಿಕ ಪರಿವೀಕ್ಷಕ ಲಿಂಗರಾಜು, ಸಿಆರ್‌ಪಿ ರೇಚಣ್ಣ, ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಜು ಎಸ್‌ಡಿಎಂಸಿ ಅಧ್ಯಕ್ಷ ಗುಂಬಳ್ಳಿ ರಾಜಣ್ಣ, ಶಿಕ್ಷಕರಾದ ಮಹದೇವಸ್ವಾಮಿ, ವಿ.ಕಿರಣ್ ಎಲ್.ಎನ್.ಲಕ್ಷ್ಮೀ, ಎಸ್.ಮಂಜುನಾಥ ಬಿ.ವಿ. ನಾಗರತ್ನಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net