

ಯಳಂದೂರು: ತಾಲೂಕು ಪಂಚಾಯಿತಿಗೆ 2023-24 ನೇ ಸಾಲಿನಲ್ಲಿ ಬಂದಿದ್ದ ಅನುದಾನ ಖರ್ಚು ಮಾಡದೆ ವಾಪಸ್ ಹೋಗುವಂತೆ ಮಾಡಿದ ತಾಲೂಕು ಪಂಚಾಯತ್ ರಾಜ್ ಇಲಾಖೆಯ ಎಇಇ ಮತ್ತು ಜೆಇ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗುತ್ತಿಗೆದಾರರ ಸಂಘದ ಸದಸ್ಯರು ಗುರುವಾರ ದೂರು ಸಲ್ಲಿಸಿದರು.
ತಾ ಪಂಗೆ 1.12 ಕೋಟಿ ರೂ. ಅನಿರ್ಬಂಧಿತ ಅನುದಾನ ಬಿಡುಗಡೆಯಾಗಿತ್ತು. ಪರಿಶಿಷ್ಟ ಜಾತಿ, ವರ್ಗದವರೇ ಹೆಚ್ಚಿರುವ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಕೆ ಮಾಡಿಕೊಳ್ಳಲು ಒಟ್ಟು 76 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಕೆಲವು ಕಾಮಗಾರಿಗಳನ್ನಷ್ಟೇ ಮಾಡಲಾಗಿದ್ದು, ಇದು ಕಳಪೆ ಗುಣಮಟ್ಟದಿಂದ ಕೂಡಿದೆ. ಇಂತಹ ಗುತ್ತಿಗೆದಾರರ ಜತೆ ಪಂಚಾಯತ್ ರಾಜ್ ಎಇಇ ಇಮ್ಯಾನುಯಲ್ ಸಂತೋಷ್‌ಕುಮಾರ್, ಜೆಇ ಮಂಜು ಶಾಮೀಲಾಗಿದ್ದಾರೆ. ಕೇವಲ 3 ಜನ ಗುತ್ತಿಗೆದಾರರಿಗೆ ಮಾತ್ರ ಕೆಲಸ ನೀಡಲಾಗಿದೆ. ಸ್ಥಳ ಪರಿಶೀಲನೆ ಮಾಡದೆ, ಅಳತೆ ಪುಸ್ತಕದಲ್ಲಿ ನಮೂದಿಸದೆ, ಕುಡಿಯುವ ನೀರು ವಿಭಾಗದ ಕಂಪ್ಯೂಟರ್ ಆಪರೇಟರ್ ಮೂಲಕ ಅಳತೆ ಪುಸ್ತಕದಲ್ಲಿ ನಮೂದಿಸಿ ಬಿಲ್ ಪಾವತಿ ಮಾಡಿದ್ದಾರೆ. ಕೇವಲ 33 ಲಕ್ಷ ರೂ.ಕಾಮಗಾರಿ ಮಾಡಲಾಗಿದೆ ಎಂದು ದೂರಿದರು.
ವಾಸ್ತವಾಗಿ 1.12 ಕೋಟಿ ರೂ. ಅನುದಾನದಲ್ಲಿ ಕೇವಲ 18 ಲಕ್ಷ ರೂ. ಮಾತ್ರ ಖರ್ಚಾಗಿದ್ದು, ಉಳಿದ 94 ಲಕ್ಷ ರೂ. ಸರ್ಕಾರಕ್ಕೆ ವಾಪಸ್ಸಾಗಿದೆ. ಇವರ ನಿರ್ಲಕ್ಷ್ಯದಿಂದ ಅನುದಾನ ವಾಪಸ್ಸಾಗಿದೆ, ಜತೆಗೆ ಕಳಪೆ ಕಾಮಗಾರಿಗಳಿಗೆ ಬಿಲ್ ಮಾಡಲಾಗಿದೆ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಅವರಿಗೆ ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಜಿಪಂ ಮಾಜಿ ಸದಸ್ಯ ಜೆ.ಯೋಗೇಶ್, ಗುತ್ತಿಗೆದಾರರಾದ ಕೊಮರನಪುರ ಪುಟ್ಟರಾಜು, ಮಾಂಬಳ್ಳಿ ಶಿವಕುಮಾರ್, ರಂಗರಾಮು, ಮಹದೇವು, ನಟರಾಜು, ಮದ್ದೂರು ಚಕ್ರವರ್ತಿ ಇತರರು ಇದ್ದರು.