

ಯಳಂದೂರು: ತ್ಯಾಗ, ಬಲಿದಾನಗಳ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ತಾಲೂಕಿನಾದ್ಯಂತ ಸೋಮವಾರ ಮುಸ್ಲಿಮರು ಸಂಭ್ರಮ, ಸಡಗರದಿಂದ ಆಚರಿಸಿದರು.
ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮುಂಜಾನೆಯ ಪ್ರಾರ್ಥನೆಯೊಂದಿಗೆ ಹಬ್ಬದ ಸಡಗರ ಕಳೆಗಟ್ಟಿತ್ತು. ಬೆಳಗ್ಗೆ 8.30ಕ್ಕೆ ಮಸೀದಿಯ ಮುಂಭಾಗ ಇಡೀ ಪಟ್ಟಣದ ಮುಸಲ್ಮಾನರು ಒಂದೆಡೆ ಸೇರಿ ದೇವರನಾಮಗಳನ್ನು ಹಾಡುತ್ತ ರಾಷ್ಟ್ರೀಯ ಹೆದ್ದಾರಿ 209ರ ಬಳಿ ಇರುವ ಈದ್ಗಾ ಮೈದಾನದಲ್ಲಿ ಒಟ್ಟಾಗಿ ಸೇರಿದರು. 9ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮೆಕ್ಕಾದಲ್ಲಿ ಹಜ್ ಸಂಪನ್ನಗೊಂಡ ಮಾರನೇ ದಿನ ಎಲ್ಲೆಡೆ ಬಕ್ರೀದ್ ಹಬ್ಬವನ್ನು ಆಚರಿಸುವ ವಾಡಿಕೆ ಇದೆ. ಮುಸ್ಲಿಂ ಧರ್ಮಗುರುಗಳು ಹಬ್ಬದ ಧಾರ್ಮಿಕ ವಿಧಿಗಳು, ಇದರ ಮಹತ್ವದ ಬಗ್ಗೆ ಪ್ರವಚನ ನೀಡಿದರು. ನಂತರ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಂಡಿತು.
ಬಣ್ಣಬಣ್ಣದ ಪೋಷಾಕುಗಳನ್ನು ಧರಿಸಿದ ಚಿಣ್ಣರು ಗಮನ ಸೆಳೆದರು. ಪರಸ್ಪರರು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಜಾನುವಾರುಗಳನ್ನು ಬಲಿಕೊಡುವ ಮೂಲಕ ಹಬ್ಬ ಸಂಪನ್ನಗೊಂಡಿತು. ವಿವಿಧೆಡೆ ಸಂಭ್ರಮದ ಈದ್ ಆಚರಣೆ: ತಾಲೂಕಿನ ಮಾಂಬಳ್ಳಿ, ಯರಗಂಬಳ್ಳಿ, ಗುಂಬಳ್ಳಿ, ಯರಿಯೂರು ಸಮೀಪದ ಇರಸವಾಡಿ, ಹೊಂಗನೂರು, ಮಸಣಾಪುರ, ಚಾಟೀಪುರ ಗ್ರಾಮಗಳಲ್ಲೂ ಈದ್ ಉಲ್ ಅದಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದಕ್ಕಾಗಿ ಈದ್ಗಾ ಮೈದಾನದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.