

ಯಳಂದೂರು: ಮೌಢ್ಯಗಳನ್ನು ಬಿಟ್ಟು ಅಂಬೇಡ್ಕರ್ ಹಾಕಿಕೊಟ್ಟ ತತ್ವಾದರ್ಶಗಳು ನಮಗೆ ದಾರಿದೀಪವಾಗಿದ್ದು, ಇದರ ಮೂಲಕವೇ ನಮ್ಮ ಉದ್ಧಾರ ಮಾಡಿಕೊಳ್ಳಬೇಕಿದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ತಾಲೂಕಿನ ವೈ.ಕೆ. ಮೋಳೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರನ್ನು ಕೇವಲ ಪ್ರತಿಮೆ, ರಸ್ತೆಗೆ ಹೆಸರು ಇಡುವ ಮೂಲಕ, ಅವರ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಹಾಕಿಕೊಳ್ಳುವ ಮೂಲಕ ಜೀವಂತವಾಗಿರಿಸಿಕೊಳ್ಳುವ ಬದಲು ಇವರು ನಮಗೆ ನೀಡಿರುವ ಶಿಕ್ಷಣದ ಮೂಲಕ ಜೀವಂತವಾಗಿರಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ರಾಜಕೀಯ ಪಕ್ಷಗಳು ದಲಿತ ಸಮುದಾಯವನ್ನು ಒಡೆದು ಆಳುತ್ತಿವೆ. ಅಂಬೇಡ್ಕರ್ ಅವರನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು. ಇದಕ್ಕಾಗಿ ನಾವೆಲ್ಲ ಒಗ್ಗಟ್ಟಾಗಬೇಕು. ಅಂಬೇಡ್ಕರ್ ಅವರ ನೈಜತೆಯನ್ನು ಬಿಂಬಿಸುವ ಕೆಲಸ ಮಾಡಬೇಕು ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬಾಬಾ ಸಾಹೇಬರ ಕಲ್ಪನೆ ಅಗಾಧವಾಗಿದೆ. ಇದನ್ನು ಸಂವಿಧಾನದ ರೂಪದಲ್ಲಿ ನಮಗೆ ನೀಡಿದ್ದಾರೆ. ಇದರಲ್ಲಿ ಸರ್ವಜನರೂ ಸುಖವಾಗಿ ಬಾಳುವ ಎಲ್ಲ ಅಂಶಗಳು ಅಡಕವಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಬಿ. ರಾಚಯ್ಯ ಅವರ ಬಡ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ ತಲಾ 4 ಎಕರೆ ಜಮೀನು ನೀಡಿದ್ದು, ಕ್ರಾಂತಿಕಾರಕ ಅಂಶವಾಗಿದೆ. ಅಲ್ಲದೆ ಚಿಕ್ಕಹೊಳೆ, ಸುವರ್ಣಾವತಿ ಜಲಾಶಯ, ಸೇತುವೆ ನಿರ್ಮಾಣ, ಶಾಲಾ- ಕಾಲೇಜುಗಳ ನಿರ್ಮಾಣ ಮಾಡಿ ಕ್ರಾಂತಿ ಮಾಡಿದ್ದಾರೆ. ಇಂತಹ ಅನೇಕ ರಾಜಕೀಯ ಮುತ್ಸದ್ದಿಗಳನ್ನು ನಮ್ಮ ಜಿಲ್ಲೆ ಕಂಡಿದೆ ಎಂದರು.
ಚಿತ್ರನಟ ಚೇತನ್ ಅಹಿಂಸಾ ಮಾತನಾಡಿ, ವೈಜ್ಞಾನಿಕವಾಗಿ ತಳ ಸಮುದಾಯ ಯೋಚಿಸಬೇಕಿದೆ. ಮೌಢ್ಯಗಳಲ್ಲೇ ನಮ್ಮನ್ನು ಬಂಧಿಸಿವೆ, ಆಧ್ಯಾತ್ಮಿಕತೆಯ ಭಯೋತ್ಪಾದನೆ ನಮ್ಮನ್ನು ಬಾಧಿಸುತ್ತಿದೆ. ಇದರ ಕೊಂಡಿಯನ್ನು ಕಳಚಬೇಕಿದೆ. ಇಂದು ಇಡೀ ಸಂಪತ್ತು ಕೆಲವೇ ಕೆಲವು ಜನರಲ್ಲಿದ್ದು, ಇದನ್ನು ಹಂಚಿಕೆ ಮಾಡುವ ಕೆಲಸವಾಗಬೇಕಿದೆ. ಅಂಬೇಡ್ಕರ್ ಹಾಕಿ ಕೊಟ್ಟ ನವಯಾನ ಧರ್ಮ ನಮ್ಮ ಧರ್ಮವಾಗಬೇಕಿದೆ ಎಂದರು.
ಎಸ್ಸೆಸ್ಸೆಲ್ಸಿ , ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಗ್ರಾಮದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಎಸ್‌ಎಸ್‌ಕೆ ಅಧ್ಯಕ್ಷ ಸಂದೇಶ್, ಮಧು ಮಾಲತಿ ಹೊಲೆಯಾರ್, ಮುಡುಕುತೊರೆಯ ಸಿದ್ಧರಾಮೇಶ್ವರ ಶಿವಯೋಗಿ ಸ್ವಾಮೀಜಿ, ಮಹದೇವ ಸ್ವಾಮೀಜಿ, ಲೋಕೇಶ್ ಸೀಗಡಿ, ಕಿನಕಹಳ್ಳಿ ರಾಚಯ್ಯ, ಕಂದಹಳ್ಳಿ ನಂಜುಂಡಸ್ವಾಮಿ, ಮಂಜುನಾಥ್, ಸೋಮಣ್ಣ, ಎಸ್. ಪುಟ್ಟರಾಜು, ವೈ.ಸಿ.ಕುಮಾರಸ್ವಾಮಿ ಗ್ರಾಮಸ್ಥರು, ಮುಖಂಡರು, ಯಜಮಾನರು ಸೇರಿದಂತೆ ಅನೇಕರು ಇದ್ದರು.