ತಾಯಿ ಸೇರಿದ ಮರಿಯಾನೆ

Oplus_0
Oplus_0
Published on

ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 2 ದಿನಗಳಿಂದ ಅಸ್ವಸ್ಥಗೊಂಡ ಆನೆಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ತಂಡ ಚಿಕಿತ್ಸೆ ನೀಡಿ ಮಂಗಳವಾರ ಸುರಕ್ಷಿತವಾಗಿ ಅರಣ್ಯಕ್ಕೆ ಸೇರಿಸಿದರು.

ಯಳಂದೂರು ವನ್ಯಜೀವಿ ವಲಯದ ಪುರಾಣಿಪೋಡು ಶಾಖೆಯ ಬೇತಾಳಕಟ್ಟೆ ಗಸ್ತಿನ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಸೋಮವಾರ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಜಯಣ್ಣ ಅವರ ಜಮೀನಿನ ಬಳಿ ಸುಮಾರು 2-3 ವರ್ಷದ ಗಂಡು ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿತ್ತು.

ಬಂಡಿಪುರ ಪಶು ವೈದ್ಯಾಧಿಕಾರಿ ಸಹಯೋಗದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ತಂಡ ಮರಿಆನೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿತ್ತು. ಈ ಸಮಯದಲ್ಲಿ ತಾಯಿ ಆನೆ ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ಕಾರಣ ಚಿಕಿತ್ಸೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಿಆರ್‌ಟಿ ಹುಲಿ ರಕ್ಷಿತಾ ಅರಣ್ಯದ ನಿರ್ದೇಶಕ ದೀಪಾ ಜೆ.ಕಂಟ್ರಾಕ್ಟರ್ ಮಾರ್ಗದರ್ಶನದಂತೆ ಆನೆ ಇದ್ದ ಪ್ರದೇಶದ ಸುತ್ತಮುತ್ತ ಚಲನವಲನಗಳನ್ನು ಗಮನಿಸಿ ಕ್ಯಾಮರಾಗಳನ್ನು ಅಳವಡಿಸಿ ಆನೆ ಮರಿಯನ್ನು ಪೋಷಿಸಲು ಕ್ರಮ ಕೈಗೊಳ್ಳಲಾಗಿತ್ತು. ಮಂಗಳವಾರ ಮರಿ ಚೇತರಿಸಿಕೊಂಡು ತಾಯಿಯೊಂದಿಗೆ ಕಾಡು ಸೇರಿದೆ ಎಂದು ಅರಣ್ಯ ಇಲಾಖೆಯ ಆರ್‌ಎಫ್‌ಒ ನಾಗೇಂದ್ರ ನಾಯಕ್ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net