

ಯಳಂದೂರು:ಬಿಆರ್‌ಟಿ ಅರಣ್ಯದ ರಸ್ತೆಯು ಬಹಳಷ್ಟು ಕಿರಿದಾಗಿದ್ದು, ತಿರುವುಗಳಲ್ಲಿ ಸೂಚನೆ ಫಲಕಗಳು ಇಲ್ಲದ ಪರಿಣಾಮ ಅಪಘಾತಗಳು ಹೆಚ್ಚಾಗುತ್ತಿದೆ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚಿದೆ.
ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ, ಯಾತ್ರಾ ಕ್ಷೇತ್ರವಾದ ಬಿಳಿಗಿರಿರಂಗನ ಬೆಟ್ಟಕ್ಕೆ ಗುಂಬಳ್ಳಿ ಚೆಕ್‌ಪೋಸ್ಟ್‌ನಿಂದ ಬೆಟ್ಟಕ್ಕೆ ಹೋಗುವ 18 ಕಿ.ಮೀ. ಮಾರ್ಗದ ರಸ್ತೆಯು ಬಹುತೇಕ ಕಿರಿದಾಗಿದೆ. ಇದರಿಂದ ಒಂದು ಬಸ್ ಸಂಚರಿಸಿದರೆ ಎದುರಿನಿಂದ ಬರುವ ಮತ್ತೊಂದು ವಾಹನಕ್ಕೆ ದಾರಿ ಬಿಡಬೇಕಾದರೆ ರಸ್ತೆ ಬದಿಯ ಖಾಲಿ ಸ್ಥಳದಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸಮುದ್ರ ಮಟ್ಟದಿಂದ 5 ಸಾವಿರ ಅಡಿ ಎತ್ತರದ ಪ್ರದೇಶಕ್ಕೆ ಹೋಗುವ ಮಾರ್ಗವು ಬೆಟ್ಟ ಗುಡ್ಡಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಅಪಘಾತಗಳು ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷೃ ವಹಿಸಿದ್ದಾರೆ.
ಅಪಾಯದ ತಿರುವುಗಳೇ ಹೆಚ್ಚು:
ಗುಂಬಳ್ಳಿ ಚೆಕ್‌ಪೋಸ್ಟ್‌ನಿಂದ ಬೆಟ್ಟಕ್ಕೆ ಹೋಗುವ ಮಾರ್ಗದ ರಸ್ತೆಯಲ್ಲಿ ಅಪಾಯಕರ ತಿರುವುಗಳೇ ಹೆಚ್ಚಿವೆ. ಬಸ್ ಕೆಟ್ಟು ನಿಂತರೆ ಎದುರುಗಡೆಯಿಂದ ಬರುವ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತದೆ. ಅದರಲ್ಲಿಯೂ ಬಸ್ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಜನ ಪರದಾಡುವಂತಾಗಿದೆ. ಅನುಭವ ಕಡಿಮೆ ಇರುವ ಚಾಲಕರನ್ನು ನಿಯೋಜಿಸುವುದರಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ಹಳೆಯ ಬಸ್‌ಗಳ ಬದಲು ಉತ್ತಮ ಸಾರಿಗೆ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಸೂಚನ ಫಲಕಗಳು ಇಲ್ಲ:
ಬೆಟ್ಟದ ಮಾರ್ಗದಲ್ಲಿ ಸಂಚರಿಸುವ ಮಾರ್ಗದ ತಿರುವುಗಳಲ್ಲಿ ಸೂಚನಾ ಫಲಕಗಳೇ ಇಲ್ಲ. ಇದರಿಂದ ಹೊಸದಾಗಿ ಆಗಮಿಸುವ ಸವಾರರು ಇದರ ಬಗ್ಗೆ ಮಾಹಿತಿ ಇಲ್ಲದೆ ಸಂಚರಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆಯೂ ಸಾಕಷ್ಟು ಅಪಘಾತಗಳು ಸಂಭವಿಸಿ ಪ್ರಾಣಹಾನಿಗಳು ನಡೆದಿದೆ. ಜತೆಗೆ ಸೂಚನಾ ಫಲಕಗಳನ್ನು ಹಾಕಿದ ವೇಳೆ ವನ್ಯ ಪ್ರಾಣಿಗಳು ಅದನ್ನು ಹಾಳು ಮಾಡುತ್ತಿವೆ. ಇದನ್ನು ತಕ್ಷಣ ಸರಿಪಡಿಸಿ ಮತ್ತೆ ಅಳವಡಿಸಬೇಕು. ಲೋಕೋಪಯೋಗಿ ಇಲಾಖೆ ಸೂಚನಾ ಫಲಕ, ರಸ್ತೆ ವಿಸ್ತರಣೆ ಸೇರಿದಂತೆ ರಸ್ತೆಯ ಬದಿಯಲ್ಲಿ ಕಲ್ಲಿನ ಹೊದಿಕೆ ಹಾಕಿ ಭದ್ರ ಮಾಡುವ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ.
ಅರಣ್ಯ ಇಲಾಖೆ ಅಡ್ಡಿ:
ಬಿಆರ್‌ಟಿ ಅರಣ್ಯವು ಹುಲಿ ಸಂರಕ್ಷಿತ ವಲಯ ವ್ಯಾಪ್ತಿಗೆ ಸೇರಿರುವ ಹಿನ್ನೆಲೆಯಲ್ಲಿ ರಸ್ತೆಯ ವಿಸ್ತರಣೆ ಅಥವಾ ತಡೆಗೋಡೆಗಳ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆಯ ಅನುಮತಿ ಬೇಕು. ಆದರೆ ಇದಕ್ಕೆ ಇಲಾಖೆ ಅನುಮತಿ ನೀಡುವುದಿಲ್ಲ. ಇದರಿಂದ ಈ ರಸ್ತೆ ಮಾರ್ಗದ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಬೆಟ್ಟಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಶನಿವಾರ ಹಾಗೂ ಭಾನುವಾರ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಕಾರು, ಬಸ್, ಬೈಕ್ ಸೇರಿದಂತೆ ಸಾಕಷ್ಟು ಖಾಸಗಿ ವಾಹನ ಸಂಚರಿಸುತ್ತವೆ. ಆದ್ದರಿಂದ ಬೆಟ್ಟದ ತಿರುವುಗಳಲ್ಲಿ ರಸ್ತೆಯ ವಿಸ್ತರಣೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಗಮನಹರಿಸಬೇಕಾಗಿದೆ.ರಘು, ಬೆಟ್ಟದ ನಿವಾಸಿ ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಗುಂಬಳ್ಳಿ ಚೆಕ್‌ಪೋಸ್ಟ್‌ನಿಂದ ಹೋಗುವ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಹಾಗೂ ತಡೆಗೋಡೆಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಇಲಾಖೆಯ ಅನುಮತಿ ಬೇಕು. ಜತೆಗೆ ರಸ್ತೆ ನಿರ್ವಹಣೆಗೆ ಅನುದಾನ ಬಿಡುಗಡೆಯಾದ ಬಳಿಕ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು.ಪುರುಷತ್ತೋಮ್, ಎಇಇ, ಲೋಕೋಪಯೋಗಿ ಇಲಾಖೆ ಕೊಳ್ಳೇಗಾಲ