

ಯಳಂದೂರು: ದೇವರಾಜ ಅರಸು ಅವರು ಉಳುವವನಿಗೆ ಭೂಮಿ ನೀಡಿದ ಮಾದರಿಯಲ್ಲಿ ನಮ್ಮ ತಂದೆ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರು ದಲಿತರು, ಹಿಂದುಳಿದ ವರ್ಗದವರು, ಗಿರಿಜನರಿಗೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಅನುಕೂಲ ಮಾಡಿಕೊಟ್ಟರು ಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕೆ.ದೇವರಹಳ್ಳಿ, ದಾಸನಹುಂಡಿ, ಮುಟ್ಟಿಪಾಳ್ಯ ಹಾಗೂ ಬಿಳಿಗಿರಿರಂಗನಬೆಟ್ಟ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲ್ಲಿ ರೈತರಿಗೆ ನೀಡಿರುವ ಭೂಮಿಯನ್ನು ಖಾತೆ ಮಾಡಲು ಕಾನೂನು ನಿಯಮಗಳನ್ನು ಕೇಳುತ್ತಾರೆ. ಆದರೆ ಹೊರ ರಾಜ್ಯದ ಮಾಲೀಕರಿಗೆ ಯಾವುದೇ ನಿಬಂಧನೆ ಇಲ್ಲದೆ ಖಾತೆ ಮಾಡಿಕೊಡುತ್ತಾರೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಇನ್ನು ಖಾತೆಯನ್ನು ಮಾಡಿಕೊಡದೆ ವಿಳಂಬ ಮಾಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಅರ್ಹ ರೈತರಿಗೆ ಭೂಮಿಯನ್ನು ಖಾತೆ ಮಾಡಿಕೊಡಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಡಿ.ದೇವರಾಜ ಅರಸು ಅವರು ಬಡವರ್ಗದ ಧ್ವನಿಯಾಗಿ ಕೆಲಸವನ್ನು ಮಾಡುವ ಮೂಲಕ ಎಲ್ಲ ಸಮುದಾಯದವರಿಗೂ ಅನುಕೂಲವಾಗುವಂತೆ ಉಳುವುವನೇ ಭೂಮಿಯ ಒಡೆಯ ನಿಯಮವನ್ನು ಜಾರಿಗೊಳಿಸಿ ಎಲ್ಲರಿಗೂ ಭೂಮಿಯನ್ನು ಹಂಚಿಕೆ ಮಾಡಿ ಬದುಕು ರೂಪಿಸಿದ್ದರು ಎಂದು ತಿಳಿಸಿದರು.
ತಹಸೀಲ್ದಾರ್ ಜಯಪ್ರಕಾಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಕಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ಜಿ.ವಿ.ಗೌಡ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಾಂತರಾಜು, ಸುಮಲತಾ, ಬಿಸಿಎಂ ಇಲಾಖೆ ಪ್ರಥಮ ದರ್ಜೆ ಸಹಾಯಕ ಕುಮಾರ್ ಹಾಜರಿದ್ದರು.