

ಯಳಂದೂರು : ಚಾಲಾಕಿ ಖದೀಮರು ನಕಲಿ ಕೀ ಬಳಸಿ ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ತೆರೆದು ಶನಿವಾರ ರಾತ್ರಿ 65 ಸಾವಿರ ರೂ. ಕಳವು ಮಾಡಿದ್ದಾರೆ.
ಕೆಸ್ತೂರು ಗ್ರಾಮದಿಂದ ಹೊನ್ನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿರುವ ಎಂಎಸ್‌ಐಎಲ್ ಮದ್ಯದ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಕಳೆದ ಮೂರು ದಿನಗಳಿಂದ ಸರ್ಕಾರಿ ರಜೆ ಇದ್ದ ಕಾರಣ ಅಂಗಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗಿರಲಿಲ್ಲ. ಇದನ್ನು ಅರಿತ ಖದೀಮರು ಶನಿವಾರ ರಾತ್ರಿಯೇ ನಕಲಿ ಕೀ ಬಳಸಿ ಅಂಗಡಿ ತೆರೆದು 65 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಈ ಸಂಬಂಧ ಅಂಗಡಿಯ ಕ್ಯಾಷಿಯರ್ ಮಾದಪ್ಪ ಯಳಂದೂರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ತಜ್ಞರು ಶ್ವಾನದಳ ತಂಡವು ಭಾನುವಾರ ಕಳವು ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಪೊಲೀಸರು ಅಂಗಡಿ ಹಾಗೂ ಸುತ್ತಮುತ್ತ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.