ಶಿವರುದ್ರಸ್ವಾಮಿ, ಜಯಕುಮಾರ್‌ಗೆ ಎಕ್ಸಲೆನ್ಸ್ ಪ್ರಶಸ್ತಿ

09 jayakumar 05
Published on

ಯಳಂದೂರು: ವೀರಗಾಸೆ ಕಲಾವಿದರಾದ ಗಂಗವಾಡಿ ಗ್ರಾಮದ ಡಾ.ಶಿವರುದ್ರಸ್ವಾಮಿ ಹಾಗೂ ಉಮ್ಮತ್ತೂರು ಗ್ರಾಮದ ಎಂ.ಜಯಕುಮಾರ್ ಅವರು ತಮಿಳುನಾಡಿನ ಏಷಿಯಾ ಇಂಟರ್‌ನ್ಯಾಷನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಆರ್ಟ್‌ ಇಂಟರ್‌ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗಂಗವಾಡಿ ಗ್ರಾಮದ ನಾಗಣ್ಣ, ಸುಂದ್ರಮ್ಮ ಎಂಬುವರ ಪುತ್ರ ಡಾ.ಶಿವರುದ್ರಸ್ವಾಮಿ ವೀರಗಾಸೆ ಕಲೆಯಲ್ಲಿ ನೈಪುಣ್ಯ ಸಾಧಿಸಿ ಕಳೆದ 40 ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿ ಪರಂಪರಾನುಗತವಾಗಿ ಬಂದ ಕಲೆಯನ್ನು ತಮ್ಮ ಮಗನಿಗೂ ಧಾರೆ ಎರೆದಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ದಸರಾ, ದೆಹಲಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲೂ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಉಮ್ಮತ್ತೂರು ಗ್ರಾಮದ ಎಂ. ಜಯಕುಮಾರ್ ವೀರಗಾಸೆ ಕಲೆಯಲ್ಲಿ ಹಲವು ದಶಕಗಳಿಂದ ದುಡಿಯುತ್ತಿದ್ದಾರೆ. ಇವರಿಗೂ ಅನೇಕ ಪ್ರಶಸ್ತಿಗಳು ಲಭಿಸಿದೆ. ಶಿವರುದ್ರಸ್ವಾಮಿ ಹಾಗೂ ಜಯಕುಮಾರ್ ಒಂದೇ ತಂಡದಲ್ಲಿದ್ದು ಇಬ್ಬರಿಗೂ ಏಕಕಾಲಕ್ಕೆ ಪ್ರಶಸ್ತಿ ಲಭಿಸಿರುವುದು ಅತೀವ ಸಂತಸ ತಂದಿದೆ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ. ಮಾ.17ರಂದು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net