

ಯಳಂದೂರು : ತಾಲೂಕಿನ ಬಿಳಿಗಿರಿರಂಗನಬೆಟ್ಟದ ಅಂಚೆ ಕಚೇರಿಯನ್ನು ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಭರವಸೆ ನೀಡಿದರು.
ಬಿಳಿಗಿರಿರಂಗನಬೆಟ್ಟ ವಿವೇಕಾನಂದ ಗಿರಿಜನರ ಕಲ್ಯಾಣ ಕೇಂದದಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ನಂಜನಗೂಡು ಅಂಚೆ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತ್ಯೋದಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಳಿಗಿರಿರಂಗನಬೆಟ್ಟದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದೆ. ಇಲ್ಲಿನ ಜನರಿಗೆ ಅಂಚೆ ಇಲಾಖೆಯು ಸರ್ಕಾರದ ವಿವಿಧ ಯೋಜನೆಗಳಾದ ಹಣವನ್ನು ಪ್ರತಿನಿತ್ಯ ತಲುಪಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಈ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಅಂಚೆ ಇಲಾಖೆಯು ಭಾರತ ಸರ್ಕಾರದ ಪ್ರಮುಖ ಕೇಂದ್ರಗಳಾಗಿದ್ದು, ಪ್ರತಿಯೊಂದು ಗ್ರಾಮಗಳಿಗೆ ಅಂಚೆ ಕಚೇರಿ ಎಷ್ಟರ ಮಟ್ಟಿಗೆ ನಿಮಗೆ ತಲುಪಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಅಂಚೆ ಇಲಾಖೆಯು ಗ್ರಾಮೀಣ ಮಟ್ಟದಲ್ಲಿ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಶ್ರಮಿಸುತ್ತಿದ್ದು, ಆದರಿಂದ ಪ್ರತಿಯೊಬ್ಬರೂ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಯನ್ನು ಮಾಡಿಸಿ ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಇನ್ನೂ ಹೆಚ್ಚಿನ ಜನರಿಗೆ ಸೇವೆಯನ್ನು ಕಲ್ಪಿಸಿ. ಯಾವುದೇ ಗ್ರಾಹಕರಿಗೂ ತೊಂದರೆಯಾಗದ ರೀತಿಯಲ್ಲಿ ಕೆಲಸವನ್ನು ಮಾಡಬೇಕೆಂದು ಕರೆ ನೀಡಿದರು. ಈ ವೇಳೆ ಸೋಲಿಗ ಜನರಿಗೆ ಸಾಂಕೇತಿಕವಾಗಿ ಉಳಿತಾಯ ಖಾತೆ ಪಾಸ್ ಪುಸ್ತಕ ಮತ್ತು ಗ್ರಾಮೀಣ ಅಂಚೆ ಜೀವ ವಿಮೆಯ ಬಾಂಡ್ ವಿತರಿಸಿದರು.
ದಕ್ಷಿಣ ಅಂಚೆ ವಲಯದ ಪೋಸ್ಟ್ ಜನರಲ್ ಡಾ.ಚಂದ್ರಶೇಖರ್, ನಿರ್ದೇಶಕ ಸಂದೇಶ ಮಹದೇವಪ್ಪ, ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಸಿ.ಮಾದೇಗೌಡ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷೆ ಕಮಲಮ್ಮ ಮತ್ತಿತರರು ಹಾಜರಿದ್ದರು.