ಭೀಮನ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ

17 yelandur 02
Published on

ಯಳಂದೂರು: ತಾಲೂಕಿನ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಭೀಮನ ಅಮಾವಾಸ್ಯೆಯ ನಿಮಿತ್ತ ವಿಶೇಷ ಪೂಜೆ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯೂ 23 ನೇ ವರ್ಷದ ಪೂಜಾ ಕೈಂಕರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಾಗಿತು. ಕರೊನಾ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಸಾಂಪ್ರದಾಯಿಕವಾಗಿ ಮಾತ್ರ ಪೂಜೆ ಸಲ್ಲಿಸಲಾಗುತ್ತಿತ್ತು. ಈ ಬಾರಿ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಪೂಜಾ ಕೈಂಕರ್ಯಗಳು ಜರುಗಿದವು.

ತಾಲೂಕಿನ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆಯನ್ನು ಅರ್ಪಿಸಿದರು. ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ಈ ವೇಳೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ವಿವಿಧೆಡೆ ಆಚರಣೆ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಅಗರ, ಮಾಂಬಳ್ಳಿ, ಗಣಿಗನೂರು ನೀಲಕಂಠೇಶ್ವರ ದೇವಸ್ಥಾನ, ಗುಂಬಳ್ಳಿ, ಬೂದಿತಿಟ್ಟು, ಆಮೆಕೆರೆ ರಸ್ತೆ ಬಳಿಯ ಮಹದೇಶ್ವರ, ಶಿವ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ : ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೇವಸ್ಥಾನದ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತದೆ. ಅದರಂತೆ ಈ ಬಾರಿಯೂ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಭಕ್ತರು ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆಯಿಂದ ಸಂಜೆವರೆಗೂ ಅನ್ನಸಂತರ್ಪಣೆ ಕಾರ್ಯನಡೆಸಲಾಯಿತು.

ಭಕ್ತ ಸಾಗರ: ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಭಕ್ತರು ಬೆಳಿಗ್ಗೆ ಯಿಂದಲೇ ಬರಲಾರಂಭಿಸಿದರು. ದ್ವಿಚಕ್ರವಾಹನ, ಆಟೋ, ಕಾಲ್ನಡಿಗೆಯಲ್ಲೂ ಭಕ್ತರು ಬಂದರು. ಪಟ್ಟಣದಿಂದ ಕಂದಹಳ್ಳಿ ಗ್ರಾಮದವರೆಗೂ ರಾಷ್ಟ್ರೀಯ ಹೆದ್ದಾರಿ 209 ಜನರಿಂದ ತುಂಬಿ ತುಳುಕುತ್ತಿತ್ತು. ಮಕ್ಕಳ ಆಟಿಕೆಗಳು, ತಿನಿಸುಗಳು ಹೆಚ್ಚಾಗಿ ವ್ಯಾಪಾರವಾಯಿತು.
ಸಿಸಿ ಕ್ಯಾಮರಾ ಕಣ್ಗಾವಲು : ಪೊಲೀಸ್ ಇಲಾಖೆಯಿಂದ ದೇಗುಲ ಆವರಣದ ಹಾಗೂ ದಾಸೋಹ ನಡೆಯುವ ಸ್ಥಳ ಸೇರಿದಂತೆ 10 ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಜತೆಗೆ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net