

ಯಳಂದೂರು : ರಾಜ್ಯದ ಪುರಾಣ ಪ್ರಸಿದ್ಧ ತಾಣ, ಹರಿ-ಹರರು ಒಂದಾಗಿ ನೆಲೆಸಿರುವ ಪವಿತ್ರ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟದಲ್ಲಿ ಬುಧವಾರ ಸಂಕ್ರಾಂತಿ ರಥೋತ್ಸವ (ಚಿಕ್ಕ ಜಾತ್ರೆ) ಸಂಭ್ರಮ ಸಂಭ್ರಮದಿಂದ ನೆರವೇರಿತು. ಸ್ಥಳೀಯ ಸೋಲಿಗರೂ ಸೇರಿದಂತೆ ಸಾವಿರಾರು ಜನ ರಂಗಪ್ಪನ ಭಕ್ತರು ಇದಕ್ಕೆ ಸಾಕ್ಷಿಯಾದರು.
ಮೊಳಗಿತು ಗೋವಿಂದ ನಾಮ ಘೋಷಣೆ: ಬುಧವಾರ ನಸುಕಿನಲ್ಲೇ ಸ್ವಾಮಿಗೆ ಕಲ್ಯಾಣೋತ್ಸವ, ಮುಯ್ಯಿ ಸಮರ್ಪಣೆ ನಡೆಯಿತು. ಪವಿತ್ರ ಚಿನ್ನಾಭರಣವನ್ನು ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕೃತವಾದ ಉತ್ಸವಮೂರ್ತಿಯನ್ನು ವಿವಿಧ ಬಣ್ಣ, ಬಣ್ಣದ ಪಟಗಳು, ಪತಾಕೆ, ಬಾವುಟ ಮತ್ತು ಪುಷ್ಪದಿಂದ ಅಲಂಕೃತವಾದ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 12.06 ರ ಶುಭ ಲಗ್ನದಲ್ಲಿ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ ಸಂದರ್ಭ ಭಕ್ತರ ಹರ್ಷೋದ್ಗಾರ , ಗೋವಿಂದ ನಾಮ ಘೋಷಣೆ ಮುಗಿಲು ಮುಟ್ಟಿತ್ತು. ನೆರೆದಿದ್ದ ಜನರು ಇದೇ ಸಂದರ್ಭದಲ್ಲಿ ಶಂಖ, ಜಾಗಟೆ, ನಾದಸ್ವರ ಮೊಳಗಿಸಿದರು. ದಾಸರು ಗೋವಿಂದಾ, ಗೋವಿಂದ ಎಂಬ ನಾಮಾವಳಿಯ ಸಪ್ಪಳವನ್ನು ಹಾಡುವ ಮೂಲಕ ಸಾವಿರಾರು ಭಕ್ತರ ಸಮ್ಮುಖ ತೇರು ಎಳೆದು ಸಂಭ್ರಮಿಸಿದರು. ತಾವು ಬೆಳೆದಿದ್ದ ಭತ್ತ, ರಾಗಿ, ಜೋಳ, ಮುಸುಕಿನಜೋಳ, ಸೇರಿದಂತೆ ವಿವಿಧ ಧಾನ್ಯ, ಚಿಲ್ಲರೆ ಕಾಸು, ನವ ದಂಪತಿಗಳು ಹಣ್ಣು- ಜವನಗಳನ್ನು ತೇರಿಗೆ ಎಸೆಯುವ ಮೂಲಕ ಧನ್ಯತೆ ಮೆರೆದರು. ದೇಗುಲದ ಒಂದು ಸುತ್ತ ಪ್ರದಕ್ಷಿಣೆ ಹಾಕಿದ ಚಿಕ್ಕತೇರು ಮತ್ತೆ ಸ್ವಸ್ಥಾನಕ್ಕೆ ಮರಳಿತು. ನಂತರ ಚಿನ್ನಾಭರಣಗಳಿಂದ ಅಲಂಕೃತವಾದ ಉತ್ಸವ ಮೂರ್ತಿಯನ್ನು ಮಂಟಪೋತ್ಸವಕ್ಕೆ ಕರೆದೊಯ್ಯಲಾಯಿತು.
ಬ್ಯಾಟೆಮನೆ ಸೇವೆ ಸಮರ್ಪಣೆ : ಸಂಕ್ರಾಂತಿ ಮರುದಿನದ ರಥೋತ್ಸವ ಸಂದರ್ಭ ಸಂಪ್ರದಾಯದಂತೆ ದಾಸರು ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯ ಅನುಸರಿಸಿದರು. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಪರಾಕ್, ಭೋ ಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೆ ನೆರೆದಿದ್ದ ಭಕ್ತರು ಸಾಕ್ಷಿಯಾದರು. ರಂಗನಾಥ ದೇವರನ್ನು ಮೈಸೂರಿನ ಮಹಾರಾಜರು ನೀಡಿರುವ ಕಿರೀಟ, ರತ್ನ ಖಚಿತ ವಿವಿಧ ಆಭರಣಗಳೂ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಸಾಲಿನಲ್ಲಿ ನಿಂತು ಮೂಲ ದೇವರ ದರ್ಶನವನ್ನು ಪಡೆದರು. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು.
ವಾಹನಗಳ ಸುಗಮ ಸಂಚಾರ :
ಚಿಕ್ಕ ಜಾತ್ರೆ ಸಂದರ್ಭ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿತ್ತು. ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಗುಂಬಳ್ಳಿ ಚೆಕ್ ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳದ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿಂದ ಬೆಟ್ಟಕ್ಕೆ ಕೆಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದಲ್ಲಿ ಏಟ್ರಿ ಸಂಸ್ಥೆಯ ಬಳಿ ಹಾಗೂ ರೇಷ್ಮೆ ಇಲಾಖೆಯ ಬಳಿ ಖಾಸಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಬೆಟ್ಟದ ಕಮರಿ ಮೇಲಿರುವ ದೇಗುಲದಲ್ಲಿ ವಾಹನ ದಟ್ಟಣೆ ಕಡಿಮೆ ಆಗಿತ್ತು. ಸಾಲಿನಲ್ಲಿ ನಿಂತು ಬಸ್ ಹತ್ತಲು, ಇಳಿಯಲು ವ್ಯವಸ್ಥೆ ಮಾಡಲಾಗಿತ್ತು. ದೇಗುಲದ ವತಿಯಿಂದ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನೂ ಮಾಡಿದ್ದು ಶುಚಿತ್ವ ಪಾಲನೆಗೆ ಸಹಕರಿಸಿತು.
ಬಸ್‌ಗಾಗಿ ಭಕ್ತರ ಪರದಾಟ:
ಯಳಂದೂರು ಪಟ್ಟಣದಿಂದ ಬೆಟ್ಟಕ್ಕೆ ತೆರಳಲು ಬುಧವಾರ ಬೆಳಗ್ಗೆ ಕೆಸ್ಸಾರ್ಟಿಸಿ ವತಿಯಿಂದ ಕಡಿಮೆ ಸಂಖ್ಯೆಯ ಬಸ್‌ಗಳು ಇದ್ದವು. ಹಾಗಾಗಿ ಭಕ್ತರು ಬೆಟ್ಟಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿರುವ ಚಿಕ್ಕ ಬಸ್ ನಿಲ್ದಾಣದಲ್ಲೇ ಬಸ್ ಹತ್ತಿಳಿಯಲು ವ್ಯವಸ್ಥೆ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿ ಬಾರಿಯೂ ಬೆಟ್ಟಕ್ಕೆ ಹೋಗಲು ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಇರುತ್ತಿತ್ತು. ಈ ಬಾರಿ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಅವಾಂತರಕ್ಕೆ ಕಾರಣವಾಯಿತು. ಅವ್ಯವಸ್ಥೆ ವಿರುದ್ಧ ಭಕ್ತರು ಬೇಸರ ವ್ಯಕ್ತಪಡಿಸಿದರು.
ಬೇಟೆಯಾಡಿ ಹಿಡಿದ ಮೊಲದ ಮೆರವಣಿಗೆ
ಸಂಪ್ರದಾಯದಂತೆ ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಜನಾಂಗದದವರು ಬೇಟೆಯಾಡಿ ಹಿಡಿದ ಮೊಲವನ್ನು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ರಂಗನ ಬೆಟ್ಟಕ್ಕೆ ಕೊಂಡೊಯ್ದರು. ವಿವಿಧ ಜಾನಪದ ವಾದ್ಯ ಮೇಳ, ಕೊಂಬುಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಯಜಮಾನರಾದ ಸೋಮಣ್ಣ, ವೆಂಕಟೇಶ್, ವೈ.ಸಿ.ಮಹದೇವಸ್ವಾಮಿ, ಕೆ. ವೆಂಕಟೇಶ್, ಕಾಮರಾಜು, ಕೆಂಪರಾಜು, ಕಾಮಶೆಟ್ಟಿ, ಲಿಂಗರಾಜು, ಪುಟ್ಟ, ವೈ.ಎನ್. ಪಾಂಡುರಂಗಶೆಟ್ಟಿ, ರಮೇಶ, ವೈ.ಆರ್. ವೆಂಕಟರಾಮು, ವೈ.ಕೆ.ಮೋಳೆ ನಾಗರಾಜು, ನಿಂಗರಾಜು, ಚಾಮರಾಜು ಹಾಗೂ ಯುವಕ ಸಂಘದ ಸದಸ್ಯರು ಹಾಜರಿದ್ದರು.
ಬೇಟೆಯಾಡಿ ತಂದ ಮೊಲಕ್ಕೆ ಬುಧವಾರ ರಾತ್ರಿ ಬಿಳಿಗಿರಿ ರಂಗನಬೆಟ್ಟದ ದೇಗುಲದ ಸಮೀಪದ ಕಮರಿಯ ಮೇಲಿರುವ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮೊಲದ ಕಾಲಿಗೆ ಬೆಳ್ಳಿಯ ಗೆಜ್ಜೆ ಕಟ್ಟಿ ಪೂಜೆ ಸಲ್ಲಿಸಿ ಹೊರಗೆ ಬಿಡಲಾಯಿತು. ಈ ಮೊಲ ಜಿಗಿದು ಕಾಡಿನ ಕಡೆ ಹೋಗುವ ದಿಕ್ಕಿನಲ್ಲಿ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ಪ್ರತೀತಿ ಇದೆ. ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಜನಾಂಗದವರು ಈ ಬಾರಿಯೂ ಮೊಲ ಹಿಡಿದು ತರುವ ಸೇವೆ ಸಮರ್ಪಿಸಿದ್ದು ವಿಶೇಷವಾಗಿತ್ತು.