

ಯಳಂದೂರು: ಕರೊನಾ ವೈರಸ್‌ನ ಭೀತಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಪಟ್ಟಣದ ಐತಿಹಾಸಿಕ ಪ್ರಸಿದ್ಧ ಬಳೇಮಂಟಪ ಹಾಗೂ ಗೌರೇಶ್ವರ ದೇಗುಲವನ್ನು ತಾತ್ಕಾಲಿಕವಾಗಿ ಸಾರ್ವಜನಿಕ ವೀಕ್ಷಣೆಗೆ ಬಂದ್ ಮಾಡಲಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಈ ದೇಗುಲ ಸೇರಿದಂತೆ ಇಲ್ಲಿನ ಎಲ್ಲ ದೇಗುಲಗಳಿಗೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ಮಂಟಪದ ಸುತ್ತುಗೋಡೆ ಹಾಗೂ ಗೇಟ್‌ನಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ.
ಹದ್ದಿನ ಕಣ್ಣು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಪ್ರತಿ ವಾಹನವನ್ನೂ ಗುಂಬಳ್ಳಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಹದೇವಯ್ಯ ಮಾಹಿತಿ ನೀಡಿದರು. ಮುಖ್ಯವಾಗಿ ಹೊರದೇಶ, ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರವಾಸಿಗರು ಹಾಗೂ ಭಕ್ತರಿಗೆ ಪ್ರವೇಶವನ್ನು ನೀಡುತ್ತಿಲ್ಲ. ಸ್ಥಳೀಯರನ್ನು ಹೊರತು ಪಡಿಸಿ ಬೇರೆ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡುತ್ತಿದ್ದಾರೆ. ಪ್ರವಾಸಿಗರು ದಯವಿಟ್ಟು ಈ ಬಗ್ಗೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ವಾರವೂ ಸಂತೆ ಇಲ್ಲ: ಭಾನುವಾರ ಪಟ್ಟಣದಲ್ಲಿ ನಡೆಯುವ ಸಂತೆಯನ್ನು ಈ ವಾರವೂ ರದ್ದು ಮಾಡಲಾಗಿದೆ. ಕಳೆದ ವಾರ ನಿಷೇಧದ ನಡುವೆಯೂ ವರ್ತಕರು ತಾವು ತಂದಿದ್ದ ವಸ್ತುಗಳನ್ನು ರಸ್ತೆ ಬದಿಯಲ್ಲಿಟ್ಟು ವ್ಯಾಪಾರ ಮಾಡಿದ್ದರು. ಆದರೆ ಈ ಬಾರಿ ಸಂತೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಎಲ್ಲೆಡೆ ಬ್ಯಾನರ್, ಮೈಕ್‌ಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಕರೊನಾ ಒಬ್ಬರಿಂದ ಒಬ್ಬರಿಗೆ ಹರಡುವ ಮಾರಕ ಕಾಯಿಲೆಯಾಗಿದೆ. ಇದರ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಈ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ವಾರ ಸಂತೆ ಇರುವುದಿಲ್ಲ. ವ್ಯಾಪಾರಿಗಳು ಹಾಗೂ ಗ್ರಾಹಕರು ದಯವಿಟ್ಟು ಇದಕ್ಕೆ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಎಂ.ಸಿ.ನಾಗರತ್ನಾ ಮನವಿ ಮಾಡಿದ್ದಾರೆ.