

ಸದನದ ಕಲಾಪದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ
ಯಳಂದೂರು : ತಾಲೂಕಿನಲ್ಲಿ ಅವಶ್ಯಕತೆ ಹಾಗೂ ಅನುದಾನದ ಲಭ್ಯತೆ ಆಧರಿಸಿ ಆದ್ಯತೆಯ ಮೇರೆಗೆ ಬಸ್ ನಿಲ್ದಾಣಗಳ ನಿರ್ಮಾಣ
ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸದನದ ಕಲಾಪದಲ್ಲಿ ಉತ್ತರಿಸಿದ್ದಾರೆ.ಯಳಂದೂರು ಪಟ್ಟಣ ಸೇರಿದಂತೆ, ಬಿಳಿಗಿರಿರಂಗನಬೆಟ್ಟ ಹಾಗೂ ಸಂತೆಮರಹಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕುರಿತು ಮಂಗಳವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ವಿಧಾನಸಭೆಯ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಹೋಬಳಿ ಕೇಂದ್ರ ಸಂತೆಮರಹಳ್ಳಿಯಲ್ಲಿ ಬಸ್ ನಿಲ್ದಾಣಕ್ಕಾಗಿ ಸಾರಿಗೆ ನಿಗಮ ಕಾಯ್ದಿರಿಸಿದ್ದ ಜಮೀನಿನ ಬಗ್ಗೆ ಖಾಸಗಿ ವ್ಯಕ್ತಿಗಳು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಕರಾರು ಪ್ರಕರಣ ದಾಖಲಿಸಿದ್ದರು. ನಿಗಮದ ಪರವಾಗಿ ತೀರ್ಪು ಬಂದಿದೆ. ಬಿಳಿಗಿರಿ ರಂಗನಬೆಟ್ಟದಲ್ಲಿ ಸರ್ವೇ ಸಂಖ್ಯೆ 4/56 ರಲ್ಲಿ 24 ಗುಂಟೆ ನಿವೇಶನವನ್ನು 09-02-2021 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಶಕ್ಕೆ ಪಡೆಯಲಾಗಿದೆ. ಯಳಂದೂರು ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು 01-03-2024 ರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಅರಸು ಬಡಾವಣೆಯಲ್ಲಿನ 1 ಎಕರೆ 14 ಗುಂಟೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ನಿವೇಶನವನ್ನು ನಿಗಮದ ವಶಕ್ಕೆ ಪಡೆದುಕೊಂಡು ಕ್ರಮ ವಹಿಸಲಾಗುವುದು ಎಂದು ರೆಡ್ಡಿ ಸದನಕ್ಕೆ ಉತ್ತರಿಸಿದ್ದಾರೆ.