

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗಣೇಶ ಚತುರ್ಥಿಯನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ಅಚರಿಸಲಾಯಿತು.
ತಾಲೂಕಿನ ಐತಿಹಾಸಿಕ ಎಳೆಪಿಳ್ಳಾರಿ ವಿನಾಯಕ ದೇವರ ಸನ್ನಿಧಿ, ಪಟ್ಟಣದ ವರಾಹಸ್ವಾಮಿ ದೇಗುಲದ ಬಲಬದಿಯಲ್ಲಿರುವ ಗೋಡೆ ಗಣಪತಿ ದೇಗುಲ ಹಾಗೂ ಪಟ್ಟಣದ ಬಳೇಪೇಟೆಯಲ್ಲಿರುವ ಬಲಮುರಿ ವಿನಾಯಕ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು.
ತಾಲೂಕಿನ ಹಲವು ಗ್ರಾಮಗಳಲ್ಲಿ ಹಸಿರು ಚಪ್ಪರದಲ್ಲಿ ಗಣೇಶ ಮೂರ್ತಿಯನ್ನು ಯುವಕರು ಪ್ರತಿಷ್ಠಾಪನೆ ಮಾಡಿದ್ದರು. ಕೆಲವರು ತಮ್ಮ ಮನೆಯಲ್ಲೇ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಪಟ್ಟಣದ ದೊಡ್ಡಂಗಡಿ ಬೀದಿ, ಬಳೇಪೇಟೆ ಅಂಗಡಿ ಹಾಗೂ ಹಳೇ ಅಂಚೆಕಚೇರಿ ರಸ್ತೆಯಲ್ಲಿ ಕಟ್ಟಿದ್ದ ಸಂತೆಯಲ್ಲಿ ಭರ್ಜರಿ ವ್ಯಾಪಾರವಾಯಿತು.
ಬಿಳಿಗಿರಿರಂಗನಬೆಟ್ಟಕ್ಕೆ ಭಕ್ತರ ದೌಡು: ಹಬ್ಬದ ಮಾರನೇ ದಿನವಾದ ಭಾನುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಜನಜಾತ್ರೆಯೇ ನೆರೆದಿತ್ತು. ದಾಸ ಪರಂಪರೆ ಈ ಭಾಗದಲ್ಲಿ ಹೆಚ್ಚಾಗಿದ್ದು, ಹೆಚ್ಚಿನ ಜನರು ಬಿಳಿಗಿರಿರಂಗನಬೆಟ್ಟಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಮಾಡಿ. ಅಲ್ಲಿನ ಅಂಗಳದಲ್ಲೇ ಬ್ಯಾಟೆ ಮನೆ ಸೇವೆ ಮಾಡಿ ಶಂಖ, ಜಾಗಟೆಗಳ ನಾದಮೊಳಗಿಸಿ ಹಿಂದಿರುಗುವ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಜನರು ಬೆಟ್ಟಕ್ಕೆ ತೆರಳಿದ್ದರು. ಅಲ್ಲದೆ ಹೆಚ್ಚುವರಿ ಬಸ್‌ಗಳು ಇಲ್ಲದ ಕಾರಣ ನಿಲ್ದಾಣದಲ್ಲಿ ಜನಜಂಗುಳಿ ಅಧಿಕವಾಗಿತ್ತು.
ಹಬ್ಬವಾದ ಮಾರನೇ ದಿನವಾದ ಭಾನುವಾರ ದೇವರಗುಡ್ಡರು ಹಾಗೂ ದಾಸಯ್ಯರು ಗುಂಪುಗುಂಪಾಗಿ ಅಂಗಡಿ ಬೀದಿ ಹಾಗೂ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತಿತ್ತು.