ಯಳಂದೂರು ಸಂಪೂರ್ಣ ಸ್ತಬ್ಧ

29 yelandur 02
Published on

ಯಳಂದೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಯಳಂದೂರು ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಅಂಗಡಿ-ಮುಂಗಟ್ಟುಗಳು, ಹೊಟೇಲ್‌ಗಳ ಬಾಗಿಲು ತೆರೆಯದೆ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದರೆ, ಆಟೋ, ಕಾರು, ಬಸ್‌ಗಳು ರಸ್ತೆಗಳಿಯದ ಪರಿಣಾಮ ಪಟ್ಟಣ ಬಿಕೋ ಎನ್ನುತ್ತಿತ್ತು.


ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ, ದಸಂಸ, ವರ್ತಕರ ಸಂಘ, ಆಟೋ, ಕಾರು, ಮಾಲೀಕರು-ಚಾಲಕರ ಸಂಘ, ಕಲಾವಿದರ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಬಂದ್ ಬೆಂಬಲಿಸಿ, ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು.


ಕರವೇ ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆ ಇದೆ. ಎಲ್ಲೆಡೆ ಬರ ಆವರಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಅನೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೂ ಕೂಡ ರಾತ್ರೋರಾತ್ರಿ ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟೆಗಳಿಂದ ತಮಿಳುನಾಡಿಗೆ ನೀರನ್ನು ಹರಿಸಲಾಗಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಆದರೂ ಸಹ ಕೇಂದ್ರ ಸರ್ಕಾರ ಈ ಬಗ್ಗೆ ತಾರತಮ್ಯ ಧೋರಣೆ ತೋರುತ್ತಿದೆ. ರಾಜ್ಯ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ರಾಜ್ಯದ ರೈತರ ಹಿತವನ್ನು ಕಾಪಾಡುವಲ್ಲಿ ಸೋತಿದೆ. ಪ್ರಾಧಿಕಾರದ ಆದೇಶ ನಮ್ಮ ರಾಜ್ಯಕ್ಕೆ ಮರಣಶಾಸನವಾಗಿ ಪರಿಣಮಿಸಿದೆ. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಹೀಗೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.


ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಸೋಮಣ್ಣ, ಕಲಾವಿದ ಬಳೇಪೇಟೆ ಶಾಂತರಾಜು, ಭವರ್‌ಲಾಲ್ ಮಾತನಾಡಿದರು. ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿ ಕುಳಿತ ಪ್ರತಿಭಟನಾಕಾರರು, ಎಸ್‌ಬಿಐ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ, ಮನವಿ ಸ್ವೀಕರಿಸಿದರು. ಅಲ್ಲದೆ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರ ಮನವಿ ತಲುಪಿಸುವುದಾಗಿ ಭರವಸೆ ನೀಡಿದರು.


ಹೋರಾಟಗಾರರಾದ ಅಂಬಳೆಕುಮಾರ್, ಪ್ರೀಮಿಯರ್ ಲೋಕೇಶ್, ಮಹದೇವಸಿಂಗ್, ಅಮ್ಜದ್‌ಖಾನ್, ವೆಂಕಟೇಶ್ ಹೊನ್ನೂರು, ಕೆಸ್ತೂರು ನಾಗರಾಜು, ಬಳೇಪೇಟೆ ಶಾಂತರಾಜು, ವರದ, ಬಂಗಾರು, ಕಪ್ಪಣ್ಣ, ಗೌಡಹಳ್ಳಿ ರವಿ, ಗಣಿಗನೂರು ಪ್ರಸಾದ್, ಗುಂಬಳ್ಳಿರಾಜು, ಕುಮಾರ, ಗುರುಲಿಂಗಯ್ಯ, ರಂಗಸ್ವಾಮಿ ಸೇರಿದಂತೆ ಅನೇಕರು ಇದ್ದರು.

ಸಂಪೂರ್ಣ ಬಂದ್: ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಪಟ್ಟಣದ ಬಸ್ ನಿಲ್ದಾಣ, ದೊಡ್ಡ ಅಂಗಡಿ ಬೀದಿ, ಮೈಸೂರು ರಸ್ತೆ, ಬಳೇಪೇಟೆ, ಹಳೇ ಅಂಚೆ ಕಚೇರಿ ರಸ್ತೆ ಸೇರಿದಂತೆ ಎಲ್ಲೆಡೆ ಇರುವ ಅಂಗಡಿ-ಮುಂಗಟ್ಟೆಗಳು, ಕ್ಯಾಂಟೀನ್, ಹೋಟೆಲ್‌ಗಳು, ತರಕಾರಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು. ಬಸ್, ಆಟೋ, ಕಾರುಗಳ ಓಡಾಟ ಇರಲಿಲ್ಲ. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆದಿದ್ದರೂ ಬಸ್‌ಗಳಿಲ್ಲದ ಕಾರಣ ಜನಸಂದಣಿ ಇರಲಿಲ್ಲ. ರಾಷ್ಟ್ರೀಯ ಹದ್ದಾರಿ ಸೇರಿದಂತೆ ಎಲ್ಲ ರಸ್ತೆಗಳೆಲ್ಲವೂ ವಾಹನಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಪಟ್ಟಣದ ಪ್ರಮುಖ ರಸ್ತೆ ಹಾಗೂ ಸರ್ಕಲ್‌ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net