ಯುವ ಸಾಹಿತಿ ಎಂ.ಡಿ.ಅಲಿರಾಜ್ ‘ಅಮ್ಮ’ ಕವನ ಪಠ್ಯಕ್ಕೆ ಆಯ್ಕೆ

27 Ylb 06
Published on

ಯಲಬುರ್ಗಾ: ಪಟ್ಟಣದ ಸಾಹಿತಿ, ಉಪನ್ಯಾಸಕ ಎಂ.ಡಿ.ಅಲಿರಾಜ್ ಅವರ ‘ಅಮ್ಮ’ ಎಂಬ ಕವನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಿ.ಕಾಂ. 3ನೇ ಸೆಮಿಸ್ಟರ್‌ನ ಕನ್ನಡ ಪಠ್ಯಪುಸ್ತಕದಲ್ಲಿ ಮುದ್ರಣಗೊಂಡಿದ್ದು, ತಾಲೂಕಿನ ಹಿರಿಮೆ ಹೆಚ್ಚಿಸಿದೆ.

‘ಅಮ್ಮ’ ಕವನವು ತಾಯಿಯ ಪ್ರೀತಿ, ವಾತ್ಸಲ್ಯ, ಕರುಣೆ, ಮಮತೆ, ತ್ಯಾಗ, ಋಣ ಮತ್ತು ಪ್ರೀತಿಯ ನೆನೆದು ಜೀವನ ಪೂರ್ತಿ ಉಸಿರಾಡುವ ಆಶಯವನ್ನು ಹೊಂದಿದೆ. ಎಂ.ಡಿ.ಅಲಿರಾಜ್ ಮೂಲತಃ ಪಟ್ಟಣ ನಿವಾಸಿಯಾಗಿದ್ದು, ಪ್ರಾಥಮಿಕ, ಪ್ರೌಢ ಶಿಕ್ಷಣ ಯಲಬುರ್ಗಾದಲ್ಲಿ, ನರೇಗಲ್ ಅನ್ನದಾನೇಶ್ವರ ವಿದ್ಯಾಲಯದಲ್ಲಿ ಪದವಿ, ನರಗುಂದದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲಿರಾಜ್ ರಚಿಸಿದ ಕವಿತೆಗಳು ಹೆಸರಾಂತ ಕವಿ, ಲೇಖಕರಿಂದ ಮೆಚ್ಚುಗೆ ಪಡೆದಿವೆ.

ಅರಸಿ ಬಂದಿವೆ ಪುರಸ್ಕಾರಗಳು: ಎಂ.ಡಿ.ಅಲಿರಾಜ್ ‘ಅಮ್ಮ’ ಕವಿತೆ ರಚನೆ ಜತೆಗೆ ಹುಲುಮಾನವರು, ಹಸಿವು, ಅವಳ ಮಾಯೆ, ಧೂರ್ತ ಮನುಜ, ಹರೆಯ, ಮೊದಲ ಹರುಷ, ದೇವರು ಮಾರಾಟಕ್ಕಿವೆ ಸೇರಿ ಇನ್ನೂ ಹಲವಾರು ಕವನಗಳನ್ನು ರಚಿಸಿದ್ದಾರೆ. ಸ್ಮಶಾನದ ಮೌನ, ಬಚ್ಚಲದ ಬದುಕು ಕವನಕ್ಕೆ 2019ರಲ್ಲಿ ಬೆಂಗಳೂರಿನಲ್ಲಿ ಕಹಳೆ ಪ್ರಶಸ್ತಿ, ಹಸಿವು ಕವಿತೆಗೆ 2020ರಲ್ಲಿ ರಾಜ್ಯ ಪ್ರಶಸ್ತಿ, 2022ರಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಅಮ್ಮ ಕವನಕ್ಕೆ ಅವ್ವ ಪ್ರಶಸ್ತಿ ಲಭಿಸಿದೆ.

ವಿಎಸ್‌ಕೆ ವಿವಿಯ ಬಿಕಾಂ ಮೂರನೇ ಸೆಮಿಸ್ಟರ್‌ನ ಕನ್ನಡ ಪಠ್ಯದಲ್ಲಿ ನನ್ನ ‘ಅಮ್ಮ’ ಕವನ ಆಯ್ಕೆಯಾಗಿ ಮುದ್ರಣಗೊಂಡಿರುವುದು ಬಹಳ ಖುಷಿಯಾಗಿದೆ. ಇದು ತುಂಬ ವರ್ಷಗಳ ಕನ್ನಡ ಸಾಹಿತ್ಯ ಕೃಷಿಗೆ ಸಂದ ಗೌರವವಾಗಿದೆ. ಇದರಿಂದ ಇನ್ನಷ್ಟು ಕವನಗಳ ರಚಿಸಲು ಸ್ಫೂರ್ತಿಯಾಗಿದೆ. ಕನ್ನಡ ಸೇವೆಗೆ ನಾವು ಸದಾ ಸಿದ್ದರಾಗಿರಬೇಕು ಎನ್ನುವುದೇ ನನ್ನ ಆಶಯ.
ಎಂ.ಡಿ.ಅಲಿರಾಜ್
ಯುವ ಸಾಹಿತಿ, ಉಪನ್ಯಾಸಕ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net