ದೇವಸ್ಥಾನಕ್ಕೆ ಅರ್ಚಕರನ್ನು ನೇಮಿಸಿ, ವಿಶ್ವಕರ್ಮ ಸಮಾಜದಿಂದ ಮನವಿ

MANAVI
ವಿಶ್ವಕರ್ಮ ಸಮಾಜದಿಂದ ಯಲಬುರ್ಗಾ ತಹಸಿಲ್ ಕಚೇರಿ ಶಿರಸ್ತೇದಾರ್ ಎಂ.ದೇವರಡ್ಡಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಸಮಾಜದ ಪ್ರಮುಖರಾದ ಚಂದ್ರಶೇಖರ ಕಮ್ಮಾರ, ಶರಣಕುಮಾರ ಬಡಿಗೇರ್, ಈಶಪ್ಪ ಬಡಿಗೇರ್, ಶಿವಾನಂದ ಬಡಿಗೇರ್, ವಿಶ್ವನಾಥ ಲಿಂಗನಬಂಡಿ, ಮಲ್ಲಯ್ಯ ದಮ್ಮೂರು, ಚಂದ್ರಪ್ಪ ಬಡಿಗೇರ್ ಇದ್ದರು.
Published on

ಯಲಬುರ್ಗಾ: ಲಿಂಗನಬಂಡಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಸಮುದಾಯದಿಂದ ಪೂಜಾ ವಿಧಿ-ವಿಧಾನ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅರ್ಚಕರನ್ನು ನೇಮಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮಾಜದಿಂದ ಪಟ್ಟಣದ ತಹಸಿಲ್ ಕಚೇರಿ ಶಿರಸ್ತೇದಾರ್ ಎಂ.ದೇವರಡ್ಡಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ಕಮ್ಮಾರ ಮತ್ತು ಉಪಾಧ್ಯಕ್ಷ ಶರಣಕುಮಾರ ಬಡಿಗೇರ್ ಮಾತನಾಡಿ, ಲಿಂಗನಬಂಡಿ ಮೌನೇಶ್ವರ ದೇವಸ್ಥಾನ ಪುರಾತನ ಕಾಲದ್ದಾಗಿದ್ದು, ಅಪಾರ ಭಕ್ತರನ್ನು ಹೊಂದಿದೆ. ಅಮಾವಾಸ್ಯೆ, ಹುಣ್ಣಿಮೆಗೆ ದೇವಸ್ಥಾನದಲ್ಲಿ ಪೂಜೆ-ಪುನಸ್ಕಾರಗಳು ವಿಜೃಂಭಣೆಯಿಂದ ಜರುಗುತ್ತವೆ.

ದೇವಾಲಯ ಆಸ್ತಿ ವಿಚಾರಕ್ಕೆ ಸಂಬಂಧಿಸಿ ವ್ಯಾಜ್ಯ ಇರುವುದರಿಂದ ಇತ್ತೀಚೆಗೆ ಪೂಜೆ-ಪುನಸ್ಕಾರ ಹಾಗೂ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ದೇವಸ್ಥಾನಕ್ಕೆ ಅರ್ಚಕರಿಲ್ಲದಾಗಿದೆ. ಜಿಲ್ಲೆಯಲ್ಲಿ ಏಕೈಕ ಪವಿತ್ರ ಸ್ಥಳ ಇದಾಗಿದೆ. ಮದುವೆ, ಉಪನಯನ, ದೀಕ್ಷಾ ಕಾರ್ಯಕ್ರಮ ನಿತ್ಯ ನಡೆಯುತ್ತಿವೆ. ಹೀಗಾಗಿ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಅರ್ಚಕರನ್ನು ನೇಮಿಸಿ ಧಾರ್ಮಿಕ ಕಾರ್ಯಕ್ರಮ ನಡೆಯಲು ಅನುಕೂಲ ಕಲ್ಪಿಸಬೇಕು ಎಂದರು.

ದಮ್ಮೂರಿನ ಮಲ್ಲಯ್ಯ ಬಡಿಗೇರ್ ಹೆಸರಿನ ಅರ್ಚಕನನ್ನು ತಾತ್ಕಾಲಿಕವಾಗಿ ಧಾರ್ಮಿಕ ವಿಧಿ-ವಿಧಾನ ನಡೆಸಲು ಭಕ್ತರು, ಸಮುದಾಯದ ಮನವಿ ಮೇರೆಗೆ ಮೌಖಿಕವಾಗಿ ನೇಮಿಸಲಾಗಿದೆ. ಇತ್ತೀಚಿಗೆ ಅವರಿಗೆ ಸರ್ಕಾರದಿಂದ ಯಾವುದೇ ಸಹಾಯ-ಸಹಕಾರ ನೀಡದೆ ಕೈಬಿಡಲಾಗಿದೆ. ಜಾತ್ರೆ ಮುಗಿದ ಬಳಿಕ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇದರಿಂದ ಪುರಾತನ ದೇವಸ್ಥಾನದಲ್ಲಿ ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಭಕ್ತರ ಅನುಕೂಲಕ್ಕಾಗಿ ಬಾಗಿಲು ತೆರೆಯಬೇಕು. ಲಿಂಗನಬಂಡಿ ರೈಲು ನಿಲ್ದಾಣಕ್ಕೆ ಮೌನೇಶ್ವರ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಈಶಪ್ಪ ಬಡಿಗೇರ್, ಶಿವಾನಂದ ಬಡಿಗೇರ್, ವಿಶ್ವನಾಥ ಲಿಂಗನಬಂಡಿ, ಮಲ್ಲಯ್ಯ ದಮ್ಮೂರು, ಚಂದ್ರಪ್ಪ ಬಡಿಗೇರ್, ಅಂಬ್ರಪ್ಪ ಬಡಿಗೇರ್, ಡಿ.ಮೌನೇಶ ಬಡಿಗೇರ್, ಬಸಪ್ಪ ಕಮ್ಮಾರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net