ನನ್ನ ಗೆಲುವಿನಿಂದ ರಾಯರಡ್ಡಿ ಶಕ್ತಿ ಹೆಚ್ಚಳ - ಎಂಎಲ್ಸಿ ಶರಣಗೌಡ ಬಯ್ಯಪುರ ಹೇಳಿಕೆ

201221 Yalaburga Sharanagouda MLC Honor
ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎಂಎಲ್ಸಿ ಶರಣಗೌಡ ಬಯ್ಯಪುರರನ್ನು ಭಾನುವಾರ ಸನ್ಮಾನಿಸಲಾಯಿತು.
Published on

ಯಲಬುರ್ಗಾ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಎಂಎಲ್ಸಿ ಶರಣಗೌಡ ಬಯ್ಯಪುರ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ಅಂತ್ಯ ಯಲಬುರ್ಗಾದಿಂದ ಆರಂಭವಾಗಲಿದೆ. ನನ್ನ ಗೆಲುವು ಮಾಜಿ ಸಚಿವ ಬಸವರಾಜ ರಾಯರಡ್ಡಿಗೆ ಶಕ್ತಿ ಹೆಚ್ಚಿಸಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳು ನನಗೆ ಲಭಿಸಿವೆ ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಆದ್ಯತೆ ನೀಡದ ಬಿಜೆಪಿಗೆ ಮೀಸಲಾತಿ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಇಷ್ಟೊತ್ತಿಗೆ ತಾಪಂ, ಜಿಪಂ ಚುನಾವಣೆ ಮುಗಿಯಬೇಕಿತ್ತು. ಆದರೆ ಅದರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಚುನಾವಣೆ ಮುಂದೂಡಲು ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆ ಮುಂದೂಡುವ ಯತ್ನ ಮಾಡುತ್ತಿದೆ. ಇದನ್ನು ಗ್ರಾಪಂ ಸದಸ್ಯರು, ಸಾರ್ವಜನಿಕರು ಸೂಕ್ಷ್ಮವಾಗಿ ಅರಿಯಬೇಕು. ಸ್ಥಳೀಯ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಯತ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್, ಪ್ರಮುಖರಾದ ಯಂಕಣ್ಣ ಯರಾಶಿ, ಬಿ.ಎಂ.ಶಿರೂರು, ಕೆರಿಬಸಪ್ಪ ನಿಡಗುಂದಿ, ಹನುಮಂತಗೌಡ ಪಾಟೀಲ್, ಎ.ಜಿ.ಬಾವಿಮನಿ, ಕಾಸೀಂಸಾಬ್ ತಳಕಲ್ಲ, ದೊಡ್ಡಬಸನಗೌಡ ಬಯ್ಯಪುರ, ಜಯಶ್ರೀ ಕಂದಕೂರು, ಫರಿದಾ ಬೇಗಂ, ಮಂಜುನಾಥ ಕಡೆಮನಿ, ರಾಮಣ್ಣ ಸಾಲಬಾವಿ, ಎಂ.ಎಫ್.ನದಾಫ್, ರೇವಣೆಪ್ಪ ಸಂಗಟಿ, ಆರ್.ಜಿ.ನಿಂಗೋಜಿ, ಮಹಾಂತೇಶ ಗಾಣಿಗೇರ, ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net