ನಮ್ಮನ್ನು ನಾವು ಅರಿತುಕೊಳ್ಳಬೇಕಿದೆ - ಸರ್ವಾಧ್ಯಕ್ಷ ಬಿ.ಜಿ.ಹುಲಿ ಹೇಳಿಕೆ

Yalaburga 13th Kannada Sammelana
ಚಿಕ್ಕವಂಕಲಕುಂಟಾದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್ ಚಾಲನೆ ನೀಡಿದರು.
Published on

ಯಲಬುರ್ಗಾ: ನಮ್ಮನ್ನು ನಾವು ಅರಿಯದೇ ಬೇರೆಯವರನ್ನು ಅರಿಯಲು ಹೊರಟಿದ್ದೇವೆ. ನಮ್ಮನ್ನು ನಾವು ಅರಿಯುವುದು ಮೂಲ ಆಶಯವಾಗಬೇಕು ಎಂದು ಯಲಬುರ್ಗಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಜಿ.ಹುಲಿ ಹೇಳಿದರು.

ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ 13 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯವು ನಮ್ಮೊಳಗಿನ ಅರಿವೆಂಬ ಅಕ್ಷರೋತ್ತಮ ದರ್ಶನ ಮಾಡಿಸುವಂತಿರಬೇಕು. ಸಾಹಿತ್ಯದ ಆನಂದ ಸವಿಯಲು ಅಕ್ಷರವಂತರು, ಪಂಡಿತರಾಗಬೇಕೆಂದಿಲ್ಲ. ಸಾಹಿತ್ಯ ನಮ್ಮ ಜೀವನದ ಮೂಲ ದ್ರವ್ಯವಾಗುತ್ತದೆ. ಧನ್ಯತೆಯೂ ಪಡೆಯುತ್ತದೆ. ಈ ದಿಸೆಯಲ್ಲಿ ಸಾಹಿತ್ಯವನ್ನು ಬೆಳೆಸಬೇಕಾಗುತ್ತದೆ ಎಂದರು. ಸಾಮಾನ್ಯರ ಹಾಗೂ ಮಹಿಳೆಯರ ರಕ್ಷಕ ಹನುಮ ಎಲ್ಲರ ಆರಾಧಕನಾಗಿದ್ದಾನೆ. ಹನುಮ ಇಲ್ಲದ ಊರಿಲ್ಲ ಎನ್ನುವ ಮೂಲಕ ಭಾಷಣದುದ್ದಕ್ಕೂ ಹನುಮನ ಸ್ಮರಿಸಿದರು.

ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್, ಇಂದಿಗೂ ತಾಂಡವವಾಡುತ್ತಿರುವ ಜಾತಿ, ಮೌಢ್ಯತೆಯನ್ನು ಮೆಟ್ಟಿ ನಿಲ್ಲುವಂತಹ ಸಾಹಿತ್ಯ ನಮಗೆ ಬೇಕಿದೆ. ಕನ್ನಡತನ, ಸಂಸ್ಕೃತಿ ಎನ್ನುವುದು ಉಳಿದುಕೊಂಡು ಬಂದಿದ್ದರೆ ಅದು ಗ್ರಾಮೀಣ ಭಾಗದಿಂದ. ಕನ್ನಡ ಸಾಹಿತ್ಯ ಕುರಿತು ವೇದಿಕೆಗಳ ಮೇಲೆ ಅನೇಕ ಚರ್ಚೆಗಳು ನಡೆದಾಗ ಹೊಸ ಆಯಾಮಗಳನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net