

ಯಲಬುರ್ಗಾ: ತಾಲೂಕಿನ ವಜ್ರಬಂಡಿ ಬಳಿಯ ಸ್ಟೋನ್ ಕ್ರಷರ್‌ನ ಗಣಿಗಾರಿಕೆ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕು ಜೆಡಿಎಸ್ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ತಹಸಿಲ್ ಕಚೇರಿ ಮುಂದೆ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ನಡೆಯಿತು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿ, ಗಣಿಗಾರಿಕೆ ಮತ್ತು ಕಲ್ಲು ಬ್ಲಾಸ್ಟಿಂಗ್‌ನಿಂದ ಸುತ್ತಲಿನ ಜನರಿಗೆ ತೊಂದರೆಯಾಗುತ್ತಿದ್ದು, ಜೀವಭಯದಲ್ಲಿ ಜೀವನ ನಡೆಸುವಂತಾಗಿದೆ. ಸೂಕ್ತ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನ.13ರಂದು ಬ್ಲಾಸ್ಟಿಂಗ್‌ವೇಳೆ ಗಣಿಗಾರಿಕೆ ಸ್ಥಳದಿಂದ ವಜ್ರಬಂಡಿ ಗ್ರಾಮದ ನಿವಾಸಿಗಳ ಮನೆ ಮೇಲೆ ಕಲ್ಲು ಬಿದ್ದಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಹೀಗಾಗಿ ಕ್ರಷರ್‌ಗಳ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಭೇಟಿ ನೀಡಿ, ಈಗಾಗಲೇ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಧರಣಿ ಕೈಬಿಡುವಂತೆ ಕೋರಿದರು. ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕರೆಸುವವರೆಗೂ ಧರಣಿ ಕೈಬಿಡಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಪ್ರಮುಖರಾದ ಶರಣಪ್ಪ ರಾಂಪುರ, ಫಕೀರಪ್ಪ ವಡ್ಡರ್, ಹನುಮೇಶ ವಡ್ಡರ್, ಪ್ರಕಾಶ ಮೇಲಸಕ್ರಿ, ಶರಣಪ್ಪ ವಡ್ಡರ್,
ಕೆಂಚಪ್ಪ ಹಳ್ಳಿ, ಶಿವಕುಮಾರ ನಾಗನಗೌಡ್ರ, ಮಂಜುನಾಥ ನರೆಗಲ್, ಲಕ್ಷ್ಮಣ ಭೋವಿ, ಪರಸಪ್ಪ ಮುಧೋಳ, ರಂಗಪ್ಪ ಬಿಸನಾಳ ಇತರರು ಧರಣಿಯಲ್ಲಿದ್ದರು.
ಪ್ರಕರಣ ದಾಖಲು: ಯಲಬುರ್ಗಾ ತಾಲೂಕಿನ ವಜ್ರಬಂಡಿ ಬಳಿಯ ಸ್ಟೋನ್ ಕ್ರಷರ್‌ನಲ್ಲಿ ಸುರಕ್ಷತಾ ಕ್ರಮಕೈಗೊಳ್ಳದೇ ಕಲ್ಲು ಬ್ಲಾಸ್ಟ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕ್ರಷರ್ ಕಂಪನಿ ಮಾಲೀಕರಾದ ಅರವಿಂದಗೌಡ ಪಾಟೀಲ್, ಬಸವರಾಜ ಕಜ್ಜಿ, ಹುಲ್ಲಪ್ಪ ಉಪ್ಪಾರ ಹಾಗೂ ಕಲ್ಲು ಬ್ಲಾಸ್ಟ್ ಮಾಡಿರುವ ಕುಳಿಯಪ್ಪ ಸೇರಿ ನಾಲ್ವರ ವಿರುದ್ಧ ಪಟ್ಟಣದ ಠಾಣೆಯಲ್ಲಿ ನ.13ರಂದು ಪ್ರಕರಣ ದಾಖಲಾಗಿದೆ.