

ಯಲಬುರ್ಗಾ: ವಿಜಯದಶಮಿ ಅಂಗವಾಗಿ ಪಟ್ಟಣದ ಆರಾಧ್ಯ ದೇವತೆ ಶ್ರೀ ವಿಜಯ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಹಾಮಂಗಳೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.
ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ಪುನೀತರಾದರು. ಜಾತ್ರೆ ಅಂಗವಾಗಿ ಶ್ರೀಮಾತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ನಸುಕಿನ ಜಾವ ಮಹಾಭಿಷೇಕ, ಕರ್ಪೂರದಾರತಿ ಸೇರಿ ಇತರ ಧಾರ್ಮಿಕ ವಿಧಿಗಳು ನೆರವೇರಿದವು.
ವಿಜಯ ದುರ್ಗಾದೇವಿ ದೇವಸ್ಥಾನದಿಂದ ಬೆಳಗ್ಗೆ 11.30ಕ್ಕೆ ಪ್ರಾರಂಭಗೊಂಡ ಉತ್ಸವ ಮೂರ್ತಿ ಮೆರವಣಿಗೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ರಾಜಬೀದಿಗಳಲ್ಲಿ ಸಂಚರಿಸಿ ದೇಗುಲಕ್ಕೆ ಬಂದು ಸಮಾಪ್ತಿಗೊಂಡಿತು. ಸಕಲ ಕಲಾ-ವಾದ್ಯ ಮೇಳಗಳು ಪಾಲ್ಗೊಂಡಿದ್ದವು. ನಂತರ ಅನ್ನ ಸಂತರ್ಪಣೆ ನಡೆಯಿತು.
ದೇವಸ್ಥಾನ ಸುತ್ತಲೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ದೇವಸ್ಥಾನ ಪಕ್ಕದ ರಸ್ತೆ ಬಂದ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ದೇಗುಲ ಆವರಣದಲ್ಲಿ ಮಕ್ಕಳ ಆಟಿಕೆ, ಕುಂಕುಮ-ಬಂಢಾರ, ವಿಭೂತಿ, ಬಳೆ ಒತರ ವಸ್ತುಗಳ ಮಾರಾಟ ಭರ್ಜರಿಯಾಗಿತ್ತು.
ದೇವಿ ಮೆರವಣಿಗೆಯಲ್ಲಿ ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಸುರೇಶಗೌಡ ಶಿವನಗೌಡ, ಪಪಂ ಅಧ್ಯಕ್ಷ ಅಂದಯ್ಯ ಕ್ಕಳಿಮಠ, ಸದಸ್ಯ ವಸಂತಕುಮಾರ ಭಾವಿಮನಿ, ಮುಖ್ಯಾಧಿಕಾರಿ ನಾಗೇಶ್, ಸಂಗಪ್ಪ ಕೊಪ್ಪಳ, ದಾನನಗೌಡ ತೊಂಡಿಹಾಳ, ಸಿದ್ದರಾಮೇಶ್ ಬೆಲೇರಿ, ಶರಣಪ್ಪ ಅರಿಕೇರಿ, ಶಿವಕುಮಾರ್ ಭೂತೆ, ಸಂಗಪ್ಪ ರಾಮತಾಳ ಇತರರಿದ್ದರು. ನೂರಾರು ಮಹಿಳೆಯರು ಭಾಗವಹಿಸಿದ್ದರು.