

ಯಲಬುರ್ಗಾ: ಸಮಾಜಕ್ಕೆ ಮಾರಕವಾಗಿರುವ ಮಾನವ ಕಳ್ಳ ಸಾಗಣೆ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೆಲೇರಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆದ ಮಾನವ ಕಳ್ಳಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಮಹಿಳೆಯರು, ಮಕ್ಕಳನ್ನು ಮೋಸದಿಂದ ಪುಸಲಾಯಿಸಿ ಅವರಿಗೆ ಶೋಷಣೆ, ಲೈಂಗಿಕ ಕಿರುಕುಳ, ವೇಶ್ಯಾವಾಟಿಕೆ ಅಲ್ಲದೇ ಭಿಕ್ಷಾಟನೆಗೆ ದೂಡಲಾಗುತ್ತಿದೆ. ಇಂಥ ಸಮಾಜಘಾತುಕ ಚಟುವಟಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.
ವಿದ್ಯಾರ್ಥಿಗಳು ಪಕ್ಕದ ಹಳ್ಳಿಗಳಲ್ಲಿ ಯಾರೇ ಕಾಣೆಯಾದರೂ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವುದನ್ನು ರೂಢಿಸಿಕೊಳ್ಳಬೇಕು. 14 ವಷರ್ದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವಂತಿಲ್ಲ. ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಬಗ್ಗೆ ತಿಳಿಯಬೇಕು ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲ ಜಗದೀಶ, ಮುಖ್ಯಶಿಕ್ಷಕ ವೀರನಗೌಡ ಪಾಟೀಲ್, ಶಿಕ್ಷಣ ಸಯೋಜಕ ಬಸವರಾಜ ಅಂಗಡಿ, ಶಿಕ್ಷಕ ಶರಣಪ್ಪ ಕೊಪ್ಪದ ಇತರರಿದ್ದರು.