

ಯಲಬುರ್ಗಾ: ಪರೀಕ್ಷೆ ಸಮಿಪಿಸುತ್ತಿದ್ದು, ಉಪನ್ಯಾಸಕರ ಕೊರತೆಯಿಂದ ತರಗತಿ ನಡೆಯುತ್ತಿಲ್ಲ. ಗುರುಗಳು ಬರುತ್ತಾರೆಂದು ಪಿಜಿ ಕೇಂದ್ರದ ನಿರ್ದೇಶಕರು ಭರವಸೆ ನೀಡುತ್ತಾರೆ ಹೊರತು ಕಾರ್ಯರೂಪಕ್ಕೆ ತರುತ್ತಿಲ್ಲ . ಇದು ವಿಎಸ್‌ಕೆ ವಿವಿ ಸ್ನಾತಕೋತ್ತರ ಕೇಂದ್ರದ ಬಿಎ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ವಿಜಯವಾಣಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಳಲು ತೋಡಿಕೊಂಡ ಪರಿ.
ಪಟ್ಟಣದಲ್ಲಿ ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ, ಬಿಎ, ಬಿಕಾಂ ಪದವಿವರೆಗೆ ಇದೆ. ಇತ್ತೀಚೆಗೆ ಹೊಸದಾಗಿ ಕೊಪ್ಪಳ ವಿಶ್ವವಿದ್ಯಾಲಯ ಪ್ರಾರಂಭವಾಗಿದ್ದು, ವಿಎಸ್‌ಕೆ ವಿವಿಯ ಬಿಎ, ಬಿಕಾಂ ಕೊನೆಯ ಬ್ಯಾಚ್ ಮುಗಿಯಲಿದೆ. ಬಳಿಕ ಸಂಪೂರ್ಣವಾಗಿ ಕೊಪ್ಪಳ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಲಿದೆ.
ಈ ಅಂತಿಮ ವರ್ಷದ ಬಿಎ ತರಗತಿಗೆ 45, ಬಿಕಾಂ ವಿಭಾಗದಲ್ಲಿ 14 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಪನ್ಯಾಸಕರ ಕೊರತೆಯಿಂದ ಶೈಕ್ಷಣಿಕ ವರ್ಷದ ಬಿಎ ಮೂರನೇ ವರ್ಷದ ಐದನೇ ಸೆಮೆಸ್ಟರ್ ಪ್ರಾರಂಭ ಆದಾಗಿನಿಂದ ತರಗತಿ ನಡೆದಿಲ್ಲ. ಇದೇ ತಿಂಗಳು ಕೊನೆಯ ವಾರದಲ್ಲಿ ಪರೀಕ್ಷೆ ಆರಂಭವಾಗಲಿವೆ. ಈಗಿನಿಂದಲೇ ಶುಲ್ಕ ತುಂಬಬೇಕು ಎನ್ನವುದು ವಿ.ವಿ.ಯಿಂದ ಆದೇಶ ಬಂದಿದೆ. ಉಪನ್ಯಾಸಕರಿಲ್ಲದೇ ತರಗತಿ ನಡೆದಿಲ್ಲ. ಸೀಮಿತ ಅವಧಿಯಲ್ಲಿ ಪರೀಕ್ಷಾ ಶುಲ್ಕ ಕಟ್ಟಿ ಪರೀಕ್ಷೆಗೆ ಹೇಗೆ ಅಣಿಯಾಗಬೇಕು ಎನ್ನುವುದು ತಿಳಿಯದಾಗಿದೆ ಎನ್ನುವುದು ವಿದ್ಯಾರ್ಥಿಗಳ ಅಳಲಾಗಿದೆ. ಅಲ್ಲದೇ ವಿವಿ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ಕೂಡ ನೀಡಿದ್ದಾರೆ.
ಯಲಬುರ್ಗಾದ ಪಿಜಿ ಸೆಂಟರ್‌ಗೆ ವಿಎಸ್‌ಕೆ ವಿವಿಯಿಂದ ಬಿಎ, ಬಿಕಾಂ ತರಗತಿ ನಡೆಸಲು ಉಪನ್ಯಾಸಕರನ್ನು ಇಂದಿನಿಂದ ನಿಯೋಜನೆ ಮಾಡಲಾಗಿದೆ. ಜ.7ಕ್ಕೆ ಪರೀಕ್ಷೆ ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪಾಠ ಬೋಧನೆ ನಡೆಯಲಿದೆ.
ರುದ್ರೇಶ, ರಿಜಿಸ್ಟ್ರಾರ್, ವಿಎಸ್‌ಕೆ ವಿವಿ, ಬಳ್ಳಾರಿ
ಬಿಎ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಕೊರತೆಯಿಂದ ತರಗತಿ ನಡೆದಿಲ್ಲ. ಬಿಕಾಂಗೆ ನಾನೇ ತರಗತಿ ತೆಗೆದುಕೊಳ್ಳುತ್ತಿದ್ದು ಯಾವುದೇ ತೊಂದರೆಯಿಲ್ಲ. ಸ್ನಾತಕೋತ್ತರ ಕೇಂದ್ರಕ್ಕೆ ವಿಎಸ್‌ಕೆ ವಿವಿಯಿಂದ ಈಗಾಗಲೇ ಉಪನ್ಯಾಸಕರನ್ನು ನಿಯೋಜಿಸಿ ಆದೇಶಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚಿನ ತರಗತಿ ನಡೆಸಿ ಪರೀಕ್ಷೆಗೆ ಅನುಕೂಲ ಕಲ್ಪಿಸಲಾಗುವುದು.
ಡಾ.ಸಿ.ಐ. ಛಲವಾದಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ, ಕೊಪ್ಪಳ ವಿವಿ ಯಲಬುರ್ಗಾ
ಮೂರನೇ ವರ್ಷದ ಐದನೇ ಸೆಮೆಸ್ಟರ್‌ನ ಬಿಎ, ಬಿಕಾಂ ವಿಭಾಗಕ್ಕೆ ಉಪನ್ಯಾಸಕರ ಕೊರತೆಯಿಂದ ತರಗತಿ ನಡೆದಿಲ್ಲ. ಒಬ್ಬರು ಮಾತ್ರ ಒಂದೆರಡು ಕ್ಲಾಸ್ ತೆಗೆದುಕೊಂಡಿದ್ದು ಬಿಟ್ಟರೆ ಉಳಿದ ತರಗತಿ ನಡೆದಿಲ್ಲ. ಇದೇ ತಿಂಗಳು ಕೊನೆಯ ವಾರದಲ್ಲಿ ಪರೀಕ್ಷೆ ಇವೆ. ತರಗತಿ ನಡೆಸದೇ ಪರೀಕ್ಷೆಗೆ ಹೇಗೆ ತಯಾರಾಗಬೇಕು? ಉಪನ್ಯಾಸಕರು ಬರುತ್ತಾರೆ ಅಂತ ಎರಡು ವಾರದಿಂದ ಹೇಳುತ್ತಿದ್ದಾರೆ. ಇದೂವರೆಗೂ ಬಂದಿಲ್ಲ.
ಹೆಸರು ಹೇಳಲಿಚ್ಛಿಸದ ಪಿಜಿ ಸೆಂಟರ್‌ನ ಬಿಎ ವಿದ್ಯಾರ್ಥಿಗಳು, ಯಲಬುರ್ಗಾ