

ಯಲಬುರ್ಗಾ: ನ್ಯಾ.ಡಾ.ಎಚ್.ಎನ್. ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ಸಮೀಕ್ಷೆಗೆ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಪಟ್ಟಣದ ಜಗಜೀವನರಾಮ್ ಕಾಲನಿಯಲ್ಲಿ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿ, ಸಮೀಕ್ಷೆ ಮಾಡಲು ಬಂದ ಗಣತಿದಾರಿಗೆ ಪರಿಶಿಷ್ಟ ಜಾತಿ ಸಮುದಾಯದವರು ಸಮರ್ಪಕ ಮಾಹಿತಿ ನೀಡಬೇಕು. ಮೂರು ಹಂತದ ಸಮೀಕ್ಷೆ ನಡೆಯಲಿದ್ದು, 1ನೇ ಹಂತದಲ್ಲಿ ಮೇ 17ರವರೆಗೂ ಮನೆ-ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
2ನೇ ಹಂತ ಮೇ 19ರಿಂದ 21ರವರೆಗೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರ ಕೈಗೊಂಡು, ಮನೆ ಭೇಟಿಯಲ್ಲಿ ಬಿಟ್ಟುಹೋದ ಮಾಹಿತಿ ಸಂಗ್ರಹಿಸಲಿದ್ದಾರೆ. 3ನೇ ಹಂತ ಮೇ 19 ರಿಂದ 21 ರವರೆಗೆ ಸ್ವಯಂ ಘೋಷಣೆ (ಆನಲೈನ್ ಮೂಲಕ) ಮಾಹಿತಿ ಒದಗಿಸಬಹುದಾಗಿದೆ ಎಂದು ತಿಳಿಸಿದರು.
ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಗಣತಿದಾರರಿಗೆ ಸೂಕ್ತ ಮಾಹಿತಿ ನೀಡಿ, ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಿ. ಒಳ ಮೀಸಲಾತಿ ಹಂಚಿಕೆಗೆ ಸಹಕರಿಸಬೇಕು ಎಂದು ಕೋರಿದರು.