

ಯಲಬುರ್ಗಾ: ತಾಲೂಕಿನ ಸಂಗನಾಳ, ಮುಧೋಳ, ಕರಮುಡಿ ಹಾಗೂ ಕಲ್ಲೂರು ಗ್ರಾಮಗಳಲ್ಲಿ ಯಲಬುರ್ಗಾ ಪೊಲೀಸ್ ಠಾಣೆಯಿಂದ ಗ್ರಾಪಂ ಚುನಾವಣೆ ನಿಮಿತ್ತ ಅಪರಾಧ ತಡೆ ಮಾಸಾಚರಣೆ ನಡೆಯಿತು.
ಪಿಎಸ್‌ಐ ಹನುಮಂತಪ್ಪ ತಳವಾರ್ ಮಾತನಾಡಿ, ತಾಲೂಕಿನಲ್ಲಿ ಡಿ.22 ರಂದು ಗ್ರಾಪಂ ಚುನಾವಣೆಗಳು ನಡೆಯಲಿದ್ದು, ಯಾವುದೇ ಗಲಾಟೆ, ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅಕ್ರಮ ಮದ್ಯ ಮಾರಾಟ ಮಾಡಬಾರದು. ಕಾನೂನು ಉಲ್ಲಂಘಿಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧ ಚಟುವಟಿಕೆಗಳನ್ನು ತಡೆಯಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ಗ್ರಾಮದ ಪ್ರಮುಖರಾದ ಈರಪ್ಪ ಗುಡಿಸಲದ, ನೀಲಪ್ಪ ತೊಂಡಿಹಾಳ, ಈರಪ್ಪ ಕವಳಕೇರಿ, ಯಲ್ಲಪ್ಪ ಅಗಸಿಮುಂದಿನ, ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಗವಿಸಿದ್ದರಡ್ಡಿ, ತಮ್ಮನಗೌಡ ಇನ್ನಿತರರಿದ್ದರು.