

ಯಲಬುರ್ಗಾ: ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಯಲಬುರ್ಗಾ-ಕುಕನೂರು ತಾಲೂಕು ಘಟಕದಿಂದ ಸೋಮವಾರ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಎಸ್.ವಿ.ಧರಣಾ ಮಾತನಾಡಿ, ವೃಂದ ಮತ್ತು ನೇಮಕಾತಿ ನಿಯಮಗಳಿಂದಾಗಿ ಆಗಿರುವ ಅನ್ಯಾಯ ಸರಿಪಡಿಸಬೇಕು. 1ರಿಂದ 7ನೇ ತರಗತಿಗೆ ನೇಮಕಾತಿ ಹೊಂದಿದ ಶಿಕ್ಷಕರನ್ನು 1ರಿಂದ 5 ಎಂದು ಪರಿಗಣಿಸಿರುವುದನ್ನು ಹಿಂಪಡೆದು 1ರಿಂದ 7ನೇ ತರಗತಿ ಎಂದು ಪರಿಗಣಿಸಬೇಕು. 2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪೂರ್ವಾನ್ವಯ ಮಾಡಬೇಕು. ಪದವಿ ಪೂರೈಸಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜ್ಯೇಷ್ಠತೆ ಮತ್ತು ಆರ್ಥಿಕ ಸೌಲಭ್ಯದೊಂದಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮೀಕರಿಸಬೇಕು. ಹಿಂದಿನಂತೆ ಮುಖ್ಯಶಿಕ್ಷಕರ, ಹಿರಿಯಮುಖ್ಯಶಿಕ್ಷಕರ ಹುದ್ದೆಗೆ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು. ಅನ್ಯಾಯ ಸರಿಪಡಿಸಲು ಸಂಘಟನೆ ಹಲವಾರು ಪ್ರಯತ್ನ ಮಾಡಿದೆ. 2021ರಲ್ಲಿ ಹೋರಾಟ ಕೈಗೊಂಡಾಗ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಸ್ಪಷ್ಟ ಭರವಸೆ ರಾಜ್ಯ ಸಂಘಕ್ಕೆ ನೀಡಿದಾಗ ಹೋರಾಟ ಹಿಂಪಡೆಯಲಾಗಿತ್ತು. ಈವರೆಗೂ ನ್ಯಾಯ ದೊರಕದ ಕಾರಣ ರಾಜ್ಯ ಸಂಘ ಹೋರಾಟಕ್ಕೆ ಕರೆ ನೀಡಿದೆ. ಶಾಸಕರು ಸರ್ಕಾರದ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಶರಣಯ್ಯ ಸರಗಣಾಚಾರ, ಮಾರುತೇಶ ತಳವಾರ, ಮಹಾವೀರ ಕಲ್ಭಾವಿ, ವೀರನಗೌಡ ಪಾಟೀಲ್, ಬಸವರಾಜ ಮುಳುಗುಂದ, ಬಾಲದಂಡಪ್ಪ ತಳವಾರ್, ಬಸವರಾಜ ಹವಳೆ, ಸುಮಂಗಲಾ ತೊಂಡಿಹಾಳ, ಮೆಹಬೂಬ್ ಬಾದಶಹ, ಸಂಗಯ್ಯ ಹಿರೇಮಠ, ಗಂಗಮ್ಮ ಸೊಬಗಿನ, ಲಿಂಗರಡ್ಡೆಪ್ಪ ಕರಮುಡಿ, ಅಶೋಕ ಮಾದಿನೂರ, ಶಿವಕುಮಾರ ಮುತ್ತಾಳ, ಮುರ್ತುಜಾಸಾಬ್ ಮುಜಾವರ, ನಾಗರಾಜ ನಡುವಲಕೇರಿ, ಆಂಜನೇಯ ಈಳಿಗೇರ್, ಮಾರುತೇಶ ಸಿಂಧೋಗಿ ಇತರರಿದ್ದರು.
ನ್ಯಾಯ ಸಿಗುವವರೆಗೂ ಹೋರಾಟ: ಆ.7ರಂದು ಜಿಲ್ಲಾ ಹಂತದಲ್ಲಿ ಮನವಿ ಸಲ್ಲಿಕೆ, 12ರಂದು ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಶ್ಯಾಗೋಟಿ ತಿಳಿಸಿದರು.