

ಯಲಬುರ್ಗಾ: ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ಮುಧೋಳ ಗ್ರಾಮದಲ್ಲಿ ತಿರುಗುಣೆಪ್ಪ ಅಂದಪ್ಪ ಓಲಿ ಎಂಬುವರ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿ ಇದ್ದ ದವಸ ಧಾನ್ಯ ಮತ್ತು ಇತರೆ ವಸ್ತುಗಳು ಹಾನಿಯಾಗಿವೆ. ಸಂಬಂಧಿಸಿದ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ಭೇಟಿ: ಮನೆ ಬಿದ್ದ ಸ್ಥಳಕ್ಕೆ ಗ್ರಾಪಂ ಪಿಡಿಒ ಫಕೀರಪ್ಪ ಕಟ್ಟಿಮನಿ, ಗ್ರಾಮ ಲೆಕ್ಕಾಧಿಕಾರಿ ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯಾದ ಬಗ್ಗೆ ವರದಿ ಪಡೆದು, ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.