

ಯಲಬುರ್ಗಾ: ನಿರಂತರ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಛಾವಣಿ ಶಿಥಿಲಗೊಂಢ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಹಾಲಪ್ಪ ಆಚಾರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿ, ಕಾಲೇಜಿನ ಛಾವಣಿಯಲ್ಲಿ ಮಳೆ ನೀರು ಸಂಗ್ರಹಗೊಂಡು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಛಾವಣಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹೀಗಾಗಿ ಸಂಗ್ರಹಗೊಂಡ ನೀರು ಮುಂದಕ್ಕೆ ಹರಿಯುತ್ತಿಲ್ಲ. 20 ಲಕ್ಷ ರೂ. ವೆಚ್ಚದಲ್ಲಿ ಸಪಪೂ ಕಾಲೇಜು ಮತ್ತು ಪ್ರೌಢ ಶಾಲಾ ಛಾವಣಿ ನವೀಕರಣ ಮಾಡುವಂತೆ ಪಿಡಬ್ಲ್ಯುಡಿ ಇಲಾಖೆ ಎಇಇ ಹೇಮಂತರಾಜ್‌ಗೆ ಸೂಚಿಸಿದರು.
ಕಾಲೇಜಿಗೆ ಸಿಸಿ ಕ್ಯಾಮರಾ, ಮೈದಾನ ಸಮತಟ್ಟು, ಸ್ವಚ್ಛತೆಗೆ ಆಡಳಿತ ಆದ್ಯತೆ ನೀಡಬೇಕು. ಈ ಬಾರಿ ಪಿಯುಸಿಯಲ್ಲಿ ಕೇವಲ ಶೇ.43 ಫಲಿತಾಂಶ ಬಂದಿದೆ. ಇಲ್ಲಿ ಅನುಭವಿ ಉಪನ್ಯಾಸಕರಿದ್ದರೂ ಫಲಿತಾಂಶ ಹೆಚ್ಚಳವಾಗಿಲ್ಲ. ಗುಣಮಟ್ಟದ ಶಿಕ್ಷಣ ನೀಡಬೇಕು. ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಉಪನ್ಯಾಸಕರಿಗೆ ತಿಳಿಸಿದರು.
ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಶಿವನಗೌಡ ಬನ್ನಪ್ಪಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ನೀಲನಗೌಡ ತಳವಗೇರಿ, ತಾಪಂ ಸದಸ್ಯ ಶರಣಪ್ಪ ಈಳಿಗೇರ್, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಸಿದ್ರಾಮೇಶ ಬೇಲೇರಿ, ಈರಪ್ಪ ಬಣಕಾರ, ದೊಡ್ಡಯ್ಯ ಗುರುವಿನ, ಶಿವಾನಂದ ಬಣಕಾರ್, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ್ ಇತರರಿದ್ದರು.