

ಯಲಬುರ್ಗಾ: ನಟ ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಪ್ರವೀಣ ಚಿತ್ರಮಂದಿರದ ಮಾಲೀಕ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಕನ್ನಡ ಕ್ರಿಯಾ ಸಮಿತಿ ವೃತ್ತದಲ್ಲಿ ಶನಿವಾರ ಅಪ್ಪು ಹುಡುಗರ ಸಂಘ ಹಮ್ಮಿಕೊಂಡಿದ್ದ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುನೀತ್ ಮಾಡಿರುವ ಸಾಧನೆ ಬಹುದೊಡ್ಡದು. ನಾಡಿನ ಬಡ ಮಕ್ಕಳಿಗೆ ಶಕ್ತಿಧಾಮದ ಮೂಲಕ ಗುಣಮಟ್ಟದ ಶಿಕ್ಷಣ, ಹಲವಾರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ರಾಜ್ ಕುಟುಂಬ, ಚಿತ್ರರಂಗ, ಅಭಿಮಾನಿ ವರ್ಗಕ್ಕೆ ಅಪಾರ ನೋವು ಆಗಿದೆ. ಅವರ ಸಾಧನೆಗೆ ಎಂದಿಗೂ ಬೆಲೆ ಕಟ್ಟಲಾಗದು ಎಂದರು.
ಭೂ ನ್ಯಾಯ ಮಂಡಳಿ ಸದಸ್ಯ ವೀರಣ್ಣ ಹುಬ್ಬಳ್ಳಿ, ಪಿಎಸ್‌ಐ ಹುಲಗೇಶ ಓಂಕಾರ ಮಾತನಾಡಿದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯರಾದ ರೇವಣಪ್ಪ ಹಿರೇಕುರುಬರ, ವಸಂತ ಬಾವಿಮನಿ, ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ್, ಮುಖಂಡರಾದ ಸಂಗಪ್ಪ ಬಂಡಿ, ಮಂಜುನಾಥ ಅಧಿಕಾರಿ, ಅಪ್ಪು ಅಭಿಮಾನಿಗಳಾದ ವಿಜಯ ಜಕ್ಕಲಿ, ಶಂಕರ ಉಳ್ಳಾಗಡ್ಡಿ, ಆದರ್ಶ ಅಧಿಕಾರಿ, ಶಂಕರ ಟೆಂಗಿನಕಾಯಿ, ಕಲ್ಲೇಶಪ್ಪ ಕರಮುಡಿ, ವಿಕಾಸ್ ಉಳ್ಳಾಗಡ್ಡಿ, ಖುರ್ಷಿದ್‌ಅಲಿ ನೀಲಗಾರ್, ಶಿವರಾಜ ಬಾವಿಮನಿ, ಮನು ಬಡಿಗೇರ ಇತರರಿದ್ದರು.
ನ.27ಕ್ಕೆ ಅಪ್ಪು ಪ್ರತಿಮೆ ಅನಾವರಣ: ಯಲಬುರ್ಗಾದ ಕನ್ನಡ ಕ್ರಿಯಾ ಸಮಿತಿಯ ವೃತ್ತದ ಬಳಿ ಮೂರು ಲಕ್ಷ ರೂ. ವೆಚ್ಚದಲ್ಲಿ ಪ್ರತಿಷ್ಠಾಪಿಸಲಾದ ಡಾ.ಪುನೀತ್ ಕಂಚಿನ ಪ್ರತಿಮೆ ನ.27ರಂದು ಅನಾವರಣಗೊಳ್ಳಲಿದೆ. ಈ ಸಮಾರಂಭಕ್ಕೆ ನಟ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಕುಟುಂಬದವರು, ಚಿತ್ರರಂಗದ ನಟ-ನಟಿಯರು, ಹಿರಿಯ ಕಲಾವಿದರನ್ನು ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.