

ಯಲಬುರ್ಗಾ: ಪಂಚರಾಜ್ಯ ಚುನಾವಣೆಯಲ್ಲಿ ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಪಪಂ ಸದಸ್ಯ ಅಮರೇಶ ಹುಬ್ಬಳ್ಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಗೆಲುವು 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿರುವ ಜನತೆ, ಬಿಜೆಪಿ ಕಲ್ಯಾಣ ಕಾರ್ಯ ಮೆಚ್ಚಿ ಪಕ್ಷವನ್ನು ಆಶೀರ್ವದಿಸಿದ್ದಾರೆ ಎಂದರು.
ಪ್ರಮುಖರಾದ ಸುಧಾಕರ ದೇಸಾಯಿ, ವಸಂತ ಭಾವಿಮನಿ, ಅಂದಯ್ಯ ಕಳ್ಳಿಮಠ, ದೊಡ್ಡಯ್ಯ ಗುರುವಿನ, ಕಳಕಪ್ಪ ತಳವಾರ, ಈರಪ್ಪ ಬಣಕಾರ, ಶರಣೇಶ ಉಳ್ಳಾಗಡ್ಡಿ, ಸುರೇಶಗೌಡ ಶಿವನಗೌಡ್ರ ಇತರರಿದ್ದರು.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜನಪರ ಕಾರ್ಯ, ದೇಶದ ಭದ್ರತೆ, ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ಮೆಚ್ಚಿಕೊಂಡು ಜನತೆ ಬಿಜೆಪಿಗೆ ಆಶೀರ್ವದಿಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿಗಳು ಜನರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿವೆ ಎಂಬುದಕ್ಕೆ ಬಿಜೆಪಿ ಗೆಲುವು ಸಾಕ್ಷಿಯಾಗಿದೆ.
ಹಾಲಪ್ಪ ಆಚಾರ್, ಮಾಜಿ ಸಚಿವ