

ಯಲಬುರ್ಗಾ: ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ನಡೆಸಿದ ಚಳವಳಿ ಒಂದು ಹಂತ ತಲುಪಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಒಂದು ವೇಳೆ ಮೀಸಲಾತಿ ಒದಗಿಸಲು ವಿಳಂಬ ನೀತಿ ಅನುಸರಿಸಿದರೆ ಮತ್ತೊಮ್ಮೆ ಹೋರಾಟಕ್ಕೆ ಅಣಿಯಾಗುವ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಸಮುದಾಯದ ಸಂಘಟನೆ ಬಲಿಷ್ಠಗೊಳಿಸಬೇಕಿದೆ. ಪಂಚಮಸಾಲಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಜನ 2ಎ ಮೀಸಲಾತಿ ಪಾದಯಾತ್ರೆಯಿಂದಾಗಿ ಪಂಚಮಸಾಲಿ ಸಮುದಾಯ ಎಂದು ಹೇಳಿಕೊಳ್ಳುವ ಮೂಲಕ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಯಲಬುರ್ಗಾ ಪಂಚಮಸಾಲಿ ಸಮುದಾಯದ ತವರೂರು. ತುಮ್ಮರಗುದ್ದಿಯಲ್ಲಿ ಒಂದೇ ವರ್ಷದಲ್ಲಿ ಚನ್ನಮ್ಮ ಪುತ್ಥಳಿ, ಪಾದಯಾತ್ರೆ ಕಾರ್ಯಕ್ರಮ, ಚನ್ನಮ್ಮ ಉತ್ಸವ ಮಾಡುವ ಮೂಲಕ 3 ಕಾರ್ಯಕ್ರಮ ಅದ್ಧೂರಿಯಾಗಿ ಆಚರಣೆ ಮಾಡಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ. ಆರತಿ ಹಿಡಿಯುವ ಕೈಯಲ್ಲಿ ಪೆನ್ನು ಬರಬೇಕು. ಕುಂಭ ಹೊರುವ ಮಸ್ತಕದ ಮೇಲೆ ಪುಸ್ತಕ ಬರಬೇಕು. ಮಹಿಳೆಯರು ಬುದ್ಧಿವಂತರಾದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸ್ವಾಮೀಜಿ ತಿಳಿಸಿದರು.