ಬಾಕಿ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ: ಯಲಬುರ್ಗಾದಲ್ಲಿ ತಹಸೀಲ್ದಾರ್ ಶ್ರೀಶೈಲಗೆ ಎಬಿವಿಪಿ ಮನವಿ

04112022 yelburga abvp protest
Published on

ಯಲಬುರ್ಗಾ: ಪದವಿ ವಿದ್ಯಾರ್ಥಿಗಳ ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಎಬಿವಿಪಿ ತಾಲೂಕು ಘಟಕ ಶುಕ್ರವಾರ ಮನವಿ ಸಲ್ಲಿಸಿತು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮನೋಜ ಪಾಟೀಲ್ ಮಾತನಾಡಿ, 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಾಕಿ ಇರುವ ವಿದ್ಯಾರ್ಥಿ ವೇತನ ತ್ವರಿತಗತಿಯಲ್ಲಿ ಬಿಡುಗಡೆಗೊಳಿಸಬೇಕು. ಯುಯುಸಿಎಂಎಸ್ ತಂತ್ರಜ್ಞಾನ ಸರಿಪಡಿಸಿ ಫಲಿತಾಂಶ ಪ್ರಕಟಿಸಬೇಕು. ಲಕ್ಷಾಂತರ ಪದವಿ ವಿದ್ಯಾರ್ಥಿಗಳು ಪ್ರತಿ ವರ್ಷ ಸ್ಕಾಲರ್‌ಶಿಪ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುತ್ತಾರೆ. ಈ ಬಾರಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ಬಹುತೇಕ ವಿದ್ಯಾರ್ಥಿಗಳಿಗೆ ವೇತನ ದೊರೆತಿಲ್ಲ. ಕೂಡಲೇ ಈ ಬಗ್ಗೆ ಸರ್ಕಾರ ಹಾಗೂ ಉನ್ನತ ಶಿಕ್ಷಣ ಅಧಿಕಾರಿಗಳು ಗಮನಹರಿಸಬೇಕು. ಎನ್‌ಇಪಿ ಜಾರಿಯಾದ ನಂತರ ಎಲ್ಲ ವಿವಿಗಳಲ್ಲಿ ಯುಯುಸಿಎಂಎಸ್ ತಂತ್ರಾಂಶ ಬಳಸಿ, ದಾಖಲಾತಿಯಿಂದ ಫಲಿತಾಂಶದವರೆಗೆ ಎಲ್ಲ ರೀತಿಯ ಮಾಹಿತಿ ಇದರ ಮೂಲಕವೇ ನಮೂದಿಸಬೇಕಾಗಿದೆ. ಈ ತಂತ್ರಾಶದಲ್ಲಿರುವ ಕೆಲ ಸಮಸ್ಯೆಗಳಿಂದಾಗಿ ವಸತಿ ನಿಲಯ, ಬೇರೆ ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು ಹಾಗೂ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗಿದೆ. ಸರಿಯಾದ ರೀತಿಯಲ್ಲಿ ಫಲಿತಾಂಶ ನೀಡದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆ ಎದುರಾಗಿವೆ. ಕೂಡಲೇ ತೊಂದರೆ ಸರಿಪಡಿಸುವಂತೆ ಆಗ್ರಹಿಸಿದರು. ಎಬಿವಿಪಿ ಸಂಚಾಲಕ ಶಶಿಧರ ದೇಶಪಾಂಡೆ, ಜಿಲ್ಲಾ ಸಹ ಸಂಚಾಲಕ ಮಹೇಶ ಬಾವಿಕಟ್ಟಿ, ಕಾರ್ಯಕರ್ತ ಪ್ರಕಾಶ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net