

ಯಲಬುರ್ಗಾ: ಸಮಸ್ಯೆಗಳ ಇತ್ಯರ್ಥಕ್ಕೆ ಹಳ್ಳಿಯಿಂದ ಸರ್ಕಾರಿ ಕಚೇರಿಗಳಿಗೆ ಬರುವ ಕ್ಷೇತ್ರದ ಜನರ ತೊಂದರೆಗಳಿಗೆ ಸಕಾಲಕ್ಕೆ ಸ್ಪಂದಿಸಿ ಪರಿಹಾರ ನೀಡುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಸೂಚಿಸಿದರು. ಪಟ್ಟಣದ ಕಂದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ರೈತರು, ಮಹಿಳೆಯರು, ವೃದ್ಧರು, ಅಂಗವಿಕಲರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬಂದಾಗ ಅವರನ್ನು ಸತಾಯಿಸದೆ ತಕ್ಷಣ ಮಾಡಿಕೊಡಬೇಕು. ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಬೇಕು. ವಿಳಂಬ ನೀತಿ ಅನುಸರಿಸದೆ ಜನರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ಶಿಕ್ಷಕರ ಸಮಸ್ಯೆ, ಜೆಜೆಎಂ ಕಳಪೆ ಕಾಮಗಾರಿ, ಗ್ರಾಮ ಸ್ವಚ್ಛತೆ, ಕುಡಿವ ನೀರು, ಸ್ಮಶಾನ ಜಾಗದ ಸಮಸ್ಯೆ, ಸಾರ್ವಜನಿಕ ರಸ್ತೆ, ವಿದ್ಯುತ್, ಜಮೀನು ಪಹಣಿ ತಿದ್ದಪಡಿ ಹೀಗೆ ನಾನಾ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಶಾಸಕರು 500ಕ್ಕೂ ಹೆಚ್ಚು ಅಹವಾಲು ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ರಾಯರಡ್ಡಿ, ಒಂದೊಂದೇ ಮನವಿಗಳನ್ನು ಪರಿಶೀಲಿಸಿ ಕೆಲಸ ಮಾಡಿಕೊಡುವ ಭರವಸೆ ನೀಡಿದರು. ವಿವಿಧ ಸಮಸ್ಯೆ ಕುರಿತು ಶಾಸಕರಿಗೆ ಅಹವಾಲು ಸಲ್ಲಿಸಲು ಬಂದಿದ್ದ ಸಾರ್ವಜನಿಕರು ಇರುವ ಸ್ಥಳಕ್ಕೆ ಶಾಸಕ ರಾಯರಡ್ಡಿ ತೆರಳಿ ಮನವಿ ಸ್ವೀಕರಿಸಿದರು. ಕೆಲವರಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸ ಮಾಡಿದರು. ಇಟಗಿಯ ಅಂಗವಿಕಲೆ ಜಯಶ್ರೀ ಮಲ್ಲಪ್ಪ ಗುಳಗಣ್ಣವರ್ ಎಂಬುವರು ವೀಲ್‌ಚೇರ್ ಮೂಲಕ ಆಗಮಿಸಿ ವೀಲ್‌ಚೇರ್ ಬೈಕ್ ಕೊಡಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಇದೇ ವೇಳೆ ಸಿಡಿಪಿಒ ಸಿಂಧು ಎಲಿಗಾರನ್ನು ಕರೆದು ನಿಮ್ಮ ಇಲಾಖೆಯ ಯಾವುದೇ ಸರ್ಕಾರಿ ಅನುದಾನವಿದ್ದರೆ ಅದರಲ್ಲಿ ಬೈಕ್ ಕೊಡಿಸುವ ಪ್ರಯತ್ನ ಮಾಡಬೇಕು. ಯಾವುದಕ್ಕೂ ನನಗೆ ಮರುಉತ್ತರ ನೀಡಬೇಕು. ಇಲ್ಲವಾದರೆ ಎರಡ್ಮೂರು ತಿಂಗಳಲ್ಲಿ ನಾನೇ ವೀಲ್‌ಚೇರ್ ವಾಹನ ಕೊಡಿಸುವುದಾಗಿ ಮಹಿಳೆಗೆ ಭರವಸೆ ನೀಡಿದರು. ಗ್ರೇಡ್-2 ತಹಸೀಲ್ದಾರ್‌ಗಳಾದ ನಾಗಪ್ಪ ಸಜ್ಜನ್, ಮುರಳೀಧರ, ತಾಪಂ ಇಒಗಳಾದ ಸಂತೋಷ ಪಾಟೀಲ್, ರಾಮಣ್ಣ ದೊಡ್ಡಮನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.