ನಿವಾಸಿಗಳ ಮನೆ ಬಾಗಿಲಿಗೆ ನಮೂನೆ-3,  ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿಕೆ

Form-3
ನಾಗೇಶ
Published on

ಯಲಬುರ್ಗಾ: ಪಟ್ಟಣದ ನಿವಾಸಿಗಳು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ನಮೂನೆ-3 ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ತಿಳಿಸಿದರು.

ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನ.25 ರಿಂದ ಡಿ.4ರ ವರೆಗೆ ಪಟ್ಟಣದ 15 ವಾರ್ಡ್‌ಗಳಲ್ಲಿ ಇ-ಆಸ್ತಿ ತಂತ್ರಾಂಶ ಸರಳೀಕರಣಗೊಳಿಸಿ ಸಾರ್ವಜನಿಕರಿಗೆ ನಮೂನೆ-3 ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಆಸ್ತಿ ಖರೀದಿ, ಮಾರಾಟಕ್ಕೆ ಅನುಕೂಲವಾಗುವ ಹಿತದೃಷ್ಟಿಯಿಂದ ಕಾವೇರಿ ಮತ್ತು ಇ-ಸ್ವತ್ತು ತಂತ್ರಾಂಶ ಸಂಯೋಜಿಸಿದೆ. ಆನ್‌ಲೈನ್‌ನಲ್ಲಿ ಉತಾರ ಇದ್ದರೆ ಮಾತ್ರ ಮಾರಾಟ, ಖರೀದಿಗೆ ಅವಕಾಶವಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆಸ್ತಿಯನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದರು.

ಪಟ್ಟಣದಲ್ಲಿ ಒಟ್ಟು 8937 ಆಸ್ತಿಗಳಿವೆ. ಈ ಪೈಕಿ 4658 ಮನೆಗಳಿಗೆ ಆನ್‌ಲೈನ್ ಉತಾರ ನೀಡಲಾಗಿದೆ. ಬಾಕಿ ಇರುವ 4229 ಮನೆ ಮಾಲೀಕರು ತ್ವರಿತವಾಗಿ ನಮೂನೆ-3 ಪಡೆಯಲು ಅಗತ್ಯ ದಾಖಲೆ ಸಲ್ಲಿಸಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು ಎಂದರು.

2024-25ನೇ ಸಾಲಿಗೆ ಒಟ್ಟು 77.25 ಲಕ್ಷ ರೂ. ಆಸ್ತಿ ತೆರಿಗೆ ಬೇಡಿಕೆ ಇದ್ದು, ಇದರಲ್ಲಿ 61.62 ಲಕ್ಷ ರೂ. ವಸೂಲಿ ಆಗಿದೆ. 15.98 ಲಕ್ಷ ರೂ. ಬಾಕಿ ಇದ್ದು ವಸೂಲಾತಿ ನಡೆಸಲಾಗುತ್ತಿದೆ ಎಂದರು.

ಸಲ್ಲಿಸಬೇಕಾದ ದಾಖಲೆಗಳು: ಆಸ್ತಿ ನೋಂದಾಯಿಸಿದ ಕ್ರಿಯಾ, ದಾನ, ವಿಭಾಗ, ವಿಲ್ ಪತ್ರ, ಹಳೆಯ ಅಸಸ್‌ಮೆಂಟ್ ಮತ್ತು ಕಟ್ಟಡ ಪರವಾನಗಿ, ಆಸ್ತಿ ತೆರಿಗೆ ಪಾವತಿಸಿರುವ ದಾಖಲೆ, ಆಸ್ತಿಯ ಚೆಕ್ ಬಂದಿ, ಸ್ವತ್ತು ಹಾಗೂ ಮಾಲೀಕನ ಭಾವಚಿತ್ರ, ವಿದ್ಯುತ್ ಹಾಗೂ ನೀರಿನ ಬಿಲ್, ಮತದಾರರ ಗುರುತಿನ ಚೀಟಿ ಹಾಗೂ ಮೊಬೈಲ್ ದಾಖಲೆ ಸಲ್ಲಿಸಬೇಕು.

ಸರ್ಕಾರ ನಿವಾಸಿಗಳ ಮನೆ ಬಾಗಿಲಿಗೆ ಆನ್‌ಲೈನ್ ಮೂಲಕ ನಮೂನೆ-3 ಕೊಡುವ ವ್ಯವಸ್ಥೆ ಮಾಡುತ್ತಿದ್ದು, ಪಟ್ಟಣದ ಜನರು ಆಸ್ತಿಯನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿ ತೆರಿಗೆ ಪಾವತಿಸಿ ನಮೂನೆ-3 ಪಡೆಯಬೇಕು. ಎಲ್ಲ ವಾರ್ಡ್‌ಗಳಲ್ಲಿ ಶಿಬಿರ ಆಯೋಜಿಸಲಾಗಿದ್ದು, ಲಾಭ ಪಡೆಯಬೇಕು.

ಅಂದಯ್ಯ ಕಳ್ಳಿಮಠ

ಪಪಂ ಅಧ್ಯಕ್ಷ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net