ಮಾತೃಭಾಷೆಗೆ ಇರಲಿ ಮೊದಲ ಆದ್ಯತೆ: ಸಚಿವ ಹಾಲಪ್ಪ ಆಚಾರ್ ಸಲಹೆ

110622 Yalaburga Kasapa is the epitome of new Member
ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯ ಚಟುವಟಿಕೆಗಳ ಉದ್ಘಾಟನೆಯನ್ನು ಸಚಿವ ಹಾಲಪ್ಪ ಆಚಾರ್ ನೆರವೇರಿಸಿದರು.
Published on

ಯಲಬುರ್ಗಾ: ಕನ್ನಡ ಭಾಷೆ ಬೆಳವಣಿಗೆ ಮತ್ತು ಉಳಿವಿಗೆ ಸಾಹಿತಿಗಳ ಶ್ರಮ ಸಾಕಷ್ಟಿದೆ. ಹೀಗಾಗಿ ಪ್ರತಿಯೊಬ್ಬರೂ ಕನ್ನಡತನ ಗಟ್ಟಿಗೊಳಿಸಲು ಪ್ರಯತ್ನಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಸಾಪ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷ್ಣರಾಜ ಒಡೆಯರ್‌ರಿಂದ ಸ್ಥಾಪಿತವಾದ ಸಾಹಿತ್ಯ ಪರಿಷತ್ತಿಗೆ ತನ್ನದೇ ಇತಿಹಾಸ ಮತ್ತು ಹಿರಿಮೆ ಇದೆ. ನಾಡಿನ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಿಸಿದೆ. ಮಾತೃಭಾಷೆಯ ಗೌರವ ಹೆಚ್ಚಿಸುವ ಕಾರ್ಯ ಮಾಡಿದಾಗ ಭಾಷೆಯ ಪ್ರಬುದ್ಧತೆ ಹೆಚ್ಚಲಿದೆ ಎಂದರು.

ಮರಾಠಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷಿಕರಿಂದ ಮಾತೃಭಾಷೆಯ ಮೇಲೆ ಪ್ರಭಾವ ಬೀರುತ್ತಿದೆ. ಕರ್ನಾಟಕದಲ್ಲಿ ಕನ್ನಡದ ಪ್ರಭಾವ ಗಟ್ಟಿಗೊಳಿಸಬೇಕು. ಅಂದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಬಾಲದಂಡಪ್ಪ ತಳವಾರ್, ಪ್ರಾಚಾರ್ಯ ಎಸ್.ಜಿ.ಗುರಿಕಾರ, ಪ್ರಾಧ್ಯಾಪಕ ಪ್ರವೀಣ ಪೊ.ಪಾಟೀಲ್, ಉಪನ್ಯಾಸಕ ಈಶಪ್ಪ ಮಳಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ನಿಕಟಪೂರ್ವ ಅಧ್ಯಕ್ಷ ದೇವೇಂದ್ರಪ್ಪ ಜಿರ್ಲಿ ನೂತನ ಅಧ್ಯಕ್ಷ ಬಾಲದಂಡಪ್ಪ ತಳವಾರ್‌ಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಪದಾಧಿಕಾರಿಗಳಿಗೆ ಸಚಿವರಿಂದ ಪ್ರಮಾಣ ಪತ್ರ ವಿತರಿಸಲಾಯಿತು.

ಆಯೋಜಕರ ವಿರುದ್ಧ ಅಸಮಾಧಾನ
ಸಮಾರಂಭದ ವೇದಿಕೆ ಮೇಲೆ ಹೆಚ್ಚಿನ ಜನ ಕೂಡಿಸುವುದು ಸರಿಯಲ್ಲ. ಕಾರ್ಯಕ್ರಮ ಉದ್ಘಾಟನೆ ವೇಳೆಗೆ ವೇದಿಕೆ ಮುಂದಿರುವವರು ಎದ್ದು ಹೋದರೆ ಏನು ಪ್ರಯೋಜನ? ಸಮಯಕ್ಕೆ ಸರಿಯಾಗಿ ಸಮಾರಂಭ ನಡೆದರೆ ಗೌರವ ಬರುತ್ತದೆ. ಸಮಯದ ಬೆಲೆ ಅರ್ಥ ಮಾಡಿಕೊಳ್ಳಬೇಕು ಎಂದು ಆಯೋಜಕರ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net