ಶರಣರ ಆತ್ಮ ಕಣ್ಣಿರು ಒಪ್ಪುವುದಿಲ್ಲ, ನಿವೃತ್ತ ಪಿಎಸ್‌ಐ ಬಸನಗೌಡ ಪೊಲೀಸ್ ಪಾಟೀಲ್ ಅಭಿಮತ

Chintaka Lim. Veerabhadrappa Memorial Program
ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ಮಾಸಿಕ ಹುಣ್ಣಿಮೆಯ ಬಸವಾನುಭವ ಹಾಗೂ ಚಿಂತಕ ಲಿಂ.ವೀರಭದ್ರಪ್ಪ ಅಣ್ಣನವರ ನೆನಹು ಕಾರ್ಯಕ್ರಮವನ್ನು ನಿವೃತ್ತ ಪಿಎಸ್‌ಐ ಬಸನಗೌಡ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ಬಸವರಾಜಪ್ಪ ಇಂಗಳದಾಳ, ರೇಣುಕಪ್ಪ ಮಂತ್ರಿ, ಬಸವರಾಜ ಹೂಗಾರ ಇತರರಿದ್ದರು.
Published on

ಯಲಬುರ್ಗಾ: ಸಮಾಜದಲ್ಲಿ ಪ್ರೀತಿ ಮತ್ತು ನಿಂದನೆಗೆ ಒಳಗಾದವರ ಬದುಕು ಸಾರ್ಥಕವಾಗುತ್ತದೆ ಎಂದು ನಿವೃತ್ತ ಪಿಎಸ್‌ಐ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕೆ ಮಹಿಳಾ ಗಣದಿಂದ ಭಾನುವಾರ ಹಮ್ಮಿಕೊಂಡಿದ್ದ 99ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಹಾಗೂ ಚಿಂತಕ ಲಿಂ.ವೀರಭದ್ರಪ್ಪ ನೆನಹು ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು ಐಕ್ಯರಾದಾಗ ದುಃಖಿಸಬಾರದು, ಏಕೆಂದರೆ ಅವರ ಆತ್ಮ ಇಂಥ ಕಣ್ಣೀರನ್ನು ಒಪ್ಪುವುದಿಲ್ಲ. ಎಲ್ಲರೂ ಅವರ ಆದರ್ಶ ಪಾಲಿಸಲು ದೃಢ ನಿರ್ಧಾರ ಕೈಗೊಳ್ಳಬೇಕು. ವೀರಭದ್ರಪ್ಪ ಅವರು ಕಾಯಕ ನಿಷ್ಠೆ, ಬಸವತತ್ವ ಪ್ರಸಾರಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ ತ್ಯಾಗ ಜೀವಿ. ಮೂಢನಂಬಿಕೆಗಳ ವಿರೋಧಿ, ಏಕದೇವೋಪಾಸನೆ ಬಗ್ಗೆ ಅಪಾರ ನಂಬಿಕೆ ಉಳ್ಳವರಾಗಿದ್ದರು ಎಂದರು.

ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ಚಿಂತಕ ವೀರಭದ್ರಪ್ಪ, ತಾಲೂಕಿನ ನಾನಾ ಕಡೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಬಸವ ತತ್ವ ಪ್ರಚೂರಪಡಿಸಿ ವಚನ ಸಾಹಿತ್ಯದ ತಿರುಳು ಬಿತ್ತರಿಸುವಲ್ಲಿ ತಮ್ಮ ಜೀವನ ಸವೆಸಿದ್ದಾರೆ. ವರ್ಗ, ವರ್ಣ, ಲಿಂಗಭೇದವಿಲ್ಲದೆ ಎಲ್ಲರೊಳಗೊಂದಾಗಿ ಸಂಸ್ಕಾರ ಕಲಿಸಿದ್ದಾರೆ ಎಂದು ಹೇಳಿದರು.

ಪ್ರವಚನಕಾರ ಬಸವರಾಜಪ್ಪ ಇಂಗಳದಾಳ ಮಾತನಾಡಿ, ಬಸವಾದಿ ಶರಣರ ವಚನಗಳ ನಿಜಾಚರಣೆ ಮೈಗೂಡಿಸಿಕೊಂಡು ಬಸವತತ್ವ ಪ್ರಚಾರದಲ್ಲೇ ಜೀವನ ಸವೆಸಿದ ಶರಣ ವೀರಭದ್ರಪ್ಪ ಅವರು ನಡೆ, ನುಡಿಯಲ್ಲಿ ಒಂದಾಗಿದ್ದರು ಎಂದರು.

ಬಸವದಳ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಪ್ರಮುಖರಾದ ದೇವಪ್ಪ ಕೋಳೂರು, ನಾಗನಗೌಡ ಜಾಲಿಹಾಳ, ಪಾಲಾಕ್ಷಪ್ಪ ಹುಣಸಿಹಾಳ, ಬಸವರಾಜಪ್ಪ ಸಾಹುಕಾರ, ಶರಣಪ್ಪ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ಹನುಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಲಿಂಗನಗೌಡ ದಳಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net