ಕುಡಿವ ನೀರು ಪೂರೈಕೆಯಲ್ಲಿ ಸಮಸ್ಯೆಯಾದರೆ ಕ್ರಮ

22042020 Yelburga Halappa Achar Meeting
Published on

ಅಧಿಕಾರಿಗಳಿಗೆ ಶಾಸಕ ಆಚಾರ್ ಹೇಳಿಕೆ | ತಾಪಂ ಕಚೇರಿ ಸಭಾ ಭವನದಲ್ಲಿ ನಿರ್ವಹಣೆ ಸಭೆ

ಯಲಬುರ್ಗಾ: ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮರ್ಪಕ ನೀರು ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹಾಲಪ್ಪ ಆಚಾರ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಕಚೇರಿ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಧೋಳ, ಚಿಕ್ಕಮ್ಯಾಗೇರಿ ಹಾಗೂ ಹಿರೇವಂಕಲಕುಂಟಾ ಜಿಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮರ್ಪಕ ಕುಡಿವ ನೀರು ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಬರಗಾಲ ಇದ್ದರೂ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿಲ್ಲ. ಮೂರು ಜಿಪಂ ವ್ಯಾಪ್ತಿಗೆ ಬರುವ ಎಲ್ಲ ಗ್ರಾಪಂನ ಹಳ್ಳಿಗಳಲ್ಲಿ ಕುಡಿವ ನೀರು ನಿರ್ವಹಣೆ ಮಾಡಬೇಕು. 14ನೇ ಹಣಕಾಸು ಯೋಜನೆಯನ್ವಯ ಕುಡಿವ ನೀರಿಗೆ ಅನುದಾನ ಬಳಕೆ ಮಾಡಿಕೊಳ್ಳಬೇಕು. ಆರ್‌ಒ ಪ್ಲಾಂಟ್ ಸ್ಥಗಿತವಾಗದಂತೆ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಸರಬರಾಜು ಮಾಡಬೇಕು. ಹಳ್ಳಿಯಲ್ಲಿ ಕುಡಿವ ನೀರು, ಚರಂಡಿ ಸಮಸ್ಯೆ, ಸ್ವಚ್ಛತೆ ಸೇರಿ ಕರೊನಾ ಜಾಗೃತಿ ಬಗ್ಗೆ ತಹಸೀಲ್ದಾರ್‌ಗೆ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ದಿನದ ಮಾಹಿತಿ ನೀಡಬೇಕು ಸೂಚಿಸಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ್, ತಾಪಂ ಇಒ ಡಾ.ಜಯರಾಮ ಚವಾಣ್, ಆರ್‌ಡಬ್ಲುಎಸ್ ಎಇಇ ಶಿವುಕುಮಾರ, ಹನುಮಂತಗೌಡ ಪಾಟೀಲ್ ಹಾಗೂ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net