

ಯಲಬುರ್ಗಾ: ಪರಿಸರ ದಿನ ಬರೀ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರೂ ಪ್ರಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಬೇಕು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ತಿಮ್ಮಪ್ಪನ (ಹನುಮಪ್ಪ) ತೋಪಿನ ಆವರಣದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಮನುಷ್ಯನಿಗೂ ಉತ್ತಮ ಗಾಳಿ ಸಿಗಬೇಕಾದರೆ ಗಿಡ-ಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಎಲ್ಲರೂ ಮನೆ ಮತ್ತು ಜಮೀನುಗಳಲ್ಲಿ ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು. ಸರ್ಕಾರ ಅರಣ್ಯ ಇಲಾಖೆ ಮೂಲಕ ಹಸಿರೀಕರಣಕ್ಕಾಗಿ ಹಲವು ಯೋಜನೆ ರೂಪಿಸಿದೆ. ತ್ಯಾಜ್ಯಮುಕ್ತ ಪರಿಸರ ನಿರ್ಮಾಣದ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಿದಾಗ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರು, ಪ್ರಮುಖರಾದ ಬಸವಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ, ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಅರಣ್ಯ ರಕ್ಷಕರಾದ ಶರಣಪ್ಪ ಕದಂಪುರ, ಷರೀಫ್ ಕೊತ್ವಾಲ್, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣನವರ್ ಇತರರಿದ್ದರು.