

ಯಲಬುರ್ಗಾ: ಹನ್ನೆರಡನೇ ಶತಮಾನದ ಶಿವಶರಣರು ಜನರಲ್ಲಿ ಅರಿವು ಮತ್ತು ವೈಚಾರಿಕತೆ ಬಿಂಬಿಸುವ ಕಾರ್ಯ ಮಾಡಿದ್ದಾರೆ ಎಂದು ಗದಗ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್.ಎ.ಮುಗದ ಹೇಳಿದರು.
ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಆಶ್ರಮದಲ್ಲಿ ಬಸವ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ವಚನ ಚಿಂತನಾ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮ ಸಮಾಜ ನಿರ್ಮಾಣ, ಮೌಢ್ಯ ನಿರ್ಮೂಲನೆಗೆ ಬಸವಣ್ಣನವರು ತಮ್ಮ ವಚನಗಳ ಮೂಲಕ ಕ್ರಾಂತಿ ಮಾಡಿದ್ದಾರೆ. ಬಸವಾದಿ ಶರಣರ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚಿಂತಕ ಅಶೋಕ ಬರಗುಂಡಿ ಮಾತನಾಡಿ, ಬಸವಾದಿ ಶರಣರು ಧಾರ್ಮಿಕ ಚಳವಳಿಯ ನೇತೃತ್ವ ವಹಿಸಿ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದರು. ಇಷ್ಟಲಿಂಗದ ಮೂಲಕ ದೇಹವನ್ನೇ ದೇವಾಲಯವಾಗಿಸಿ ಆಧ್ಯಾತ್ಮಿಕ ಸಮಾನತೆ, ಕಾಯಕಕ್ಕೆ ದೈವಿಕತೆ, ದಾಸೋಹಕ್ಕೆ ಶ್ರೇಷ್ಠತೆ ತಂದುಕೊಟ್ಟರು ಎಂದರು.
ಮರಕಟ್ ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಮುಖಂಡ ಬಸವರಾಜಪ್ಪ ಇಂಗಳದಾಳ ಮಾತನಾಡಿದರು. ಪ್ರಮುಖರಾದ ಲಕ್ಷ್ಮವ್ವ ಬಳ್ಳಾರಿ, ಬಸಮ್ಮ ಮಾಲಿಪಾಟೀಲ್, ಅಮರೇಶಪ್ಪ ಮಡ್ಡರ್, ದೇವಪ್ಪ ಗೌಡ್ರ, ಅಮರಮ್ಮ ಬಳ್ಳಾರಿ ಅನ್ನ ಸಂತರ್ಪಣೆಗೈದರು. ರಾಯಚೂರು ಬಸವಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಪ್ರಮುಖರಾದ ಬಸವರಾಜಪ್ಪ ಹಿರೇಹಡಗಲಿ, ಶೇಖಣ್ಣ ಕಳಸಾಪುರಶೆಟ್ರ, ಹನುಮಗೌಡ ಬಳ್ಳಾರಿ, ರೇಣುಕಪ್ಪ ಮಂತ್ರಿ, ನಾಗನಗೌಡ ಜಾಲಿಹಾಳ, ಪಾಲಾಕ್ಷಪ್ಪ ಹುಣಸಿಹಾಳ, ದೇವಪ್ಪ ಕೊಳೂರು, ಹನುಮಂತಪ್ಪ ಗದ್ದಿ, ವಿರುಪಣ್ಣ ತೆಲಗರ, ಕೊಟ್ರಪ್ಪ ಚೌಡಾಪುರ, ಪಂಪಣ್ಣ ಹುಲಿಯಾಪುರ, ಬಸಣ್ಣ ಗೌಡ್ರ, ಹನುಮಂತಪ್ಪ ಹುಣಶಿಹಾಳ, ಹನುಮೇಶಗೌಡ್ರ, ಶರಣಪ್ಪ ಮೇಟಿ ಇತರರಿದ್ದರು.