ಮಂಡಲಮರಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ಲಾರ್ವಾ ಸಮೀಕ್ಷೆ, ಸ್ವಚ್ಛತೆ, ಫಾಗಿಂಗ್ ಮಾಡಲು ಸೂಚನೆ

081222 Mandalamari Village Dengue
ಮಂಡಲಮರಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಹಾಗೂ ತಾಪಂ, ಗ್ರಾಪಂ ಅಧಿಕಾರಿಗಳು ಗ್ರಾಮಸ್ಥರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
Published on

ಯಲಬುರ್ಗಾ: ಶಂಕಿತ ಡೆಂೆ, ಚಳಿಜ್ವರದಿಂದ ಜನ ಬಳಲುತ್ತಿರುವ ತಾಲೂಕಿನ ಮಂಡಲಮರಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಹಾಗೂ ತಾಪಂ, ಗ್ರಾಪಂ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಮಾಹಿತಿ ಪಡೆಯಿತು.

ಮನೆ ಮನೆಗೆ ತೆರಳಿ ಬುಟ್ಟಿ, ಡಬ್ಬಿ, ಬ್ಯಾರಲ್ ಹಾಗೂ ಕೊಡಗಳಲ್ಲಿ ಮೂರ್ನಾಲ್ಕು ದಿನಗಳಿಂದ ತುಂಬಿಸಿಟ್ಟಿದ್ದ ನೀರನ್ನು ಖಾಲಿ ಮಾಡಿಸಲಾಯಿತು. ಆರೋಗ್ಯ ಶಿಬಿರ ಏರ್ಪಡಿಸಿ, ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ತೀವ್ರ ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿ ಸಂಗ್ರಹಿಸಲಾಯಿತು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕೆ.ವೆಂಕಟೇಶ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದು, ಸಂಗ್ರಹವಾದ ಕಲುಷಿತ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಜನರು ಮನೆಗಳಲ್ಲಿ ಎರಡ್ಮೂರು ದಿನಗಳಿಂದ ಸಂಗ್ರಹಿಸಿದ ನೀರನ್ನು ಆಶಾ ಕಾರ್ಯಕರ್ತೆಯರು ಖಾಲಿ ಮಾಡಿಸಬೇಕು. ಕಡ್ಡಾಯವಾಗಿ ಲಾರ್ವಾ ಸಮೀಕ್ಷೆ ನಡೆಸಬೇಕು. ಗ್ರಾಪಂನವರು ಸ್ವಚ್ಛತೆ, ಫಾಗಿಂಗ್ ಮಾಡಿಸಬೇಕು. ಸಾವರ್ಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ತಾಪಂ ಇಒ ಸಂತೋಷ ಪಾಟೀಲ್ ಮಾತನಾಡಿ, ಗ್ರಾಪಂನಿಂದ ಕೂಡಲೇ ಫಾಗಿಂಗ್ ಮಾಡಿಸಿ, ನೈರ್ಮಲ್ಯ ಕಾಪಾಡಬೇಕು. ನೀರಿನ ತೊಟ್ಟಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪಿಡಿಒ ಅಬ್ದುಲ್ ಗಫರ್‌ಗೆ ಸೂಚಿಸಿದರು. ಗ್ರಾಪಂ ಸದಸ್ಯ ಸೋಮಲಿಂಗಪ್ಪ ಕುರಿ, ವೈದ್ಯಾಧಿಕಾರಿ ನೇತ್ರಾವತಿ ಹಿರೇಮಠ, ರೋಗವಾಹಕ ಆಶ್ರಿತ ರೋಗಗಳ ಮೇಲ್ವಿಚಾರಕ ಇಮ್ತಿಯಾಜ್ ನೇವಾರ್, ವೈದ್ಯ ಶ್ರೀಮಂತ ಗುತ್ತೇದಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಾದಯ್ಯ ಹಿರೇಮಠ, ಪಿಡಿಒ ಅಬ್ದುಲ್ ಗಫರ್, ಪ್ರಮುಖರಾದ ಶರಣಪ್ಪ ಪಟ್ಟೇದ, ಶರಣಪ್ಪ ಹರಿಜನ, ಬಸವರಾಜ ಮುಂಡರಗಿ, ಗಂಗಪ್ಪ ಜೂಲಕಟ್ಟಿ, ಸಿಎಚ್‌ಒ ಯಮನೂರಪ್ಪ, ಸಿಬ್ಬಂದಿ ಸಂಗಮೇಶ ಶಾಸ್ತ್ರಿ, ಮಂಜುಳಾ, ರತ್ನಾ, ಕರವಸೂಲಿಗಾರ ಗಿರಿಯಪ್ಪ ಇತರರಿದ್ದರು. ಈ ಕುರಿತು ವಿಜಯವಾಣಿ ಡಿ.8ರಂದು ‘ತೀವ್ರ ಜ್ವರದಿಂದ ಬಳಲುತ್ತಿರುವ ಗ್ರಾಮಸ್ಥರು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೂವರಲ್ಲಿ ಶಂಕಿತ ಡೆಂೆ ಕಾಣಿಸಿಕೊಂಡಿರುವ ಕುರಿತು ಖಾಸಗಿ ವರದಿ ಬಂದಿದೆ. ಅಲ್ಲದೆ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಶಿಬಿರ ಏರ್ಪಡಿಸಿದ್ದು, ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾಸ್ಪತ್ರೆಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.| ಸುಮಾ ಪಾಟೀಲ್, ಟಿಎಚ್‌ಒ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net