

ಯಲಬುರ್ಗಾ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳ ತಂಡ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆಗೆ ತೆರಳಿ ಶನಿವಾರ ಅಂಚೆ ಮತದಾನ ಕಾರ್ಯ ಕೈಗೊಂಡಿತು.
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 9 ಅಧಿಕಾರಿಗಳ ತಂಡ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನೇರವಾಗಿ ಮನೆಗಳಿಗೆ ತೆರಳಿ ಮತಗಟ್ಟೆ ಸ್ಥಾಪಿಸಿ ಮತದಾನ ಮಾಡಿಸಿದರು. ಹಿರಿಯ ಮತದಾರರು 190, ಅಂಗವಿಕಲರು 57 ಸೇರಿ ಒಟ್ಟು 247 ಮತದಾರರು ಅಂಚೆ ಮತದಾನಕ್ಕಾಗಿ ಕೋರಿಕೆ ಸಲ್ಲಿಸಿದ್ದರು. ಇದರಲ್ಲಿ ಮೂವರು ಮತದಾರರು ನಿಧನ ಹೊಂದಿದ್ದಾರೆ. ಹಿರಿಯರು, ಅಂಗವಿಕಲರು ಉತ್ಸುಕತೆಯಿಂದ ಹಕ್ಕು ಚಲಾಯಿಸಿದರು.
ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದ 106 ವರ್ಷದ ವೃದ್ಧೆ ಅಂಚೆ ಮತದಾನ ಮಾಡಿರುವುದು ವಿಶೇಷ. ಮಧ್ಯಾಹ್ನದ ವೇಳೆ ಶೇ.65 ಮತದಾನವಾಗಿದೆ. ಪ್ರತಿ ಮತಗಟ್ಟೆಗೂ ಏಳು ಜನ ಸಿಬ್ಬಂದಿ ನೇಮಿಸಲಾಗಿತ್ತು. ಕ್ಷೇತ್ರಾದ್ಯಂತ ಬೆಳಗ್ಗೆ 7.30ರಿಂದ ಸಂಜೆ 6 ಗಂಟೆವರೆಗೆ ಅಂಚೆ ಮತದಾನ ಪ್ರಕ್ರಿಯೆ ನಡೆಯಿತು.
ಮತಗಟ್ಟೆಗಳಿಗೆ ಸಹಾಯಕ ಚುನಾವಣಾಧಿಕಾರಿ ರುದ್ರೇಶಪ್ಪ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನದ ಮೂಲಕ ಮತ ಪೆಟ್ಟಿಗೆಗಳನ್ನು ಭದ್ರತಾ ಕೊಠಡಿಗೆ ರವಾನಿಸಲಾಯಿತು.