

ಯಲಬುರ್ಗಾ: ಏಡ್ಸ್ ಮಾರಕ ಕಾಯಿಲೆಯಾಗಿದ್ದು, ಅದರಿಂದ ದೂರ ಇರಬೇಕು ಎಂದು ಹೊಸ ಬೆಳಕು ಲಿಂಕ್ ವರ್ಕರ್ ರವಿ ಚನ್ನದಾಸರ ಹೇಳಿದರು.
ತಾಲೂಕಿನ ಗಾಣಧಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಹೊಸಬೆಳಕು ಸಂಸ್ಥೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮುಂಜಾಗ್ರತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸುರಕ್ಷಿತ ಲೈಂಗಿಕತೆ, ಸೋಂಕಿತರ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯವುದು, ಆಸ್ಪತ್ರೆಯಲ್ಲಿ ಸಂಸ್ಕರಣೆ ಮಾಡದ ಸೂಜಿ, ಸಿರೇಂಜ್ ಬಳಕೆ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ತಾಯಿಹಾಲು ಅಲ್ಲದೇ ಹೆರಿಗೆ ಸಮಯದಲ್ಲಿ ರೋಗ ಹರಡುತ್ತದೆ. ಆದ್ದರಿಂದ ಎಲ್ಲರೂ ಇಂಥ ಮಾರಕ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಏಡ್ಸ್ ರೋಗಿಗಳನ್ನು ಮಾನಸಿಕವಾಗಿ ಹಿಂಸಿಸದೇ ಗೌರವದಿಂದ ಕಾಣಬೇಕು ಎಂದರು.
ಸಿಎಚ್‌ಒ ಭಾಗ್ಯಲಕ್ಷ್ಮೀ ಮಾತನಾಡಿ, ಯುವ ಜನತೆ ಕ್ಷಣಿಕ ಸುಖಕ್ಕಾಗಿ ಮಾರಕ ರೋಗಕ್ಕೆ ಬಲಿಯಾಗಬಾರದು. ಏಡ್ಸ್ ರೋಗದ ಕುರಿತು ಅರಿವು ಹೊಂದುವದರ ಜತೆಗೆ ಸಾರ್ವಜನಿಕರಿಗೆ, ರೋಗಿಗಳಿಗೆ ಏಡ್ಸ್ ರೋಗ ಹರಡುವ ಕುರಿತು ಹಾಗೂ ತಡೆಗಟ್ಟಲು ಇರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ. ಅವರುಗಳಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.