

ಯಲಬುರ್ಗಾ: ವಾರ್ಡ್‌ಗಳಲ್ಲಿ ಚರಂಡಿ ಅಸ್ವಚ್ಛತೆ, ಕುಡಿವ ನೀರು, ವಿದ್ಯುತ್ ಸಮಸ್ಯೆ, ಅನೈರ್ಮಲ್ಯ ವಾತಾವರಣದಿಂದ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಗ್ಗೆ ಸಿಬ್ಬಂದಿ ಗಮನಹರಿಸುತ್ತಿಲ್ಲ ಎಂದು ಪಪಂ ಸದಸ್ಯರು ಬುಧವಾರ ಪಟ್ಟಣದ ಕಂದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪಪಂ ಸಾಮಾನ್ಯ ಸಭೆಯಲ್ಲಿ ಆಕ್ರೋಶ ಹೊರ ಹಾಕಿದರು.
ಪಟ್ಟಣದಲ್ಲಿ ಅಕ್ರಮ ಲೇಔಟ್‌ಗಳ ಸಂಖ್ಯೆ ಹೆಚ್ಚಾಗಿವೆ. ಅಲ್ಲಿ ಸ್ವಚ್ಛತೆ, ವಿದ್ಯುತ್ ಸೇರಿ ಮೂಲ ಸೌಕರ್ಯ ಕೊರತೆ ಮರೆಯಾಗಿದೆ. ಲೇಔಟ್ ಮಾಲೀಕರ ವಿರುದ್ಧ ನೋಟಿಸ್ ಜಾರಿ ಮಾಡಬೇಕು. ಸಾರಿಗೆ ಬಸ್ ಡಿಪೋ ಬಳಿ ಕೊಳಚೆ ನೀರು ಹರಿಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ ಒತ್ತಾಯಿಸಿದರು.
ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ವಸಂತ ಭಾವಿಮನಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಸಿದ್ದರಾಮೇಶ್ವರ ನಗರ ವರೆಗಿನ ಚರಂಡಿಯನ್ನು ಹತ್ತಾರು ವರ್ಷಗಳಿಂದ ಸ್ವಚ್ಛಗೊಳಿಸದ ಪರಿಣಾಮ ದುರ್ವಾಸನೆ ಬೀರುತ್ತಿದೆ. ಅಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಲೇಔಟ್‌ಗಳನ್ನು ಪತ್ತೆ ಹಚ್ಚಲು ಪಪಂ ಸದಸ್ಯರ ಸಮಿತಿ ರಚಿಸಿ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು. ಕಾನೂನು ಬಾಹಿರ ಲೇಔಟ್‌ಗಳಿಗೆ ಯಾವುದೇ ಕಾರಣಕ್ಕೂ ಉತಾರ ಕೊಡಬಾರದು ಎಂದರು.
ಪಪಂ ಸದಸ್ಯ ಹನುಮಂತ ಭಜಂತ್ರಿ ಮಾತನಾಡಿ, ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಹಲವಾರು ದಿನಗಳಿಂದ ಪ್ರಯಾಣಿಕರಿಗೆ ಕುಡಿವ ನೀರಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೋರ್ವ ಸದಸ್ಯ ರೇವಣಪ್ಪ ಹಿರೇಕುರುಬರ್ ಮಾತನಾಡಿ, 14ನೇ ವಾರ್ಡ್‌ನಲ್ಲಿ ಬೀದಿದೀಪವಿಲ್ಲದೆ ಅಲ್ಲಿನ ನಿವಾಸಿಗಳು ಭಯದಲ್ಲಿ ಜೀವನ ಕಳೆಯುವಂತಾಗಿದೆ. ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ ಇಬ್ಬರು ನಿವಾಸಿಗಳು ಸಾವನ್ನಪ್ಪಿದ್ದಾರೆ. ಇದಕ್ಕೆ ಹೊಣೆ ಯಾರು? ಕೂಡಲೇ ಪಪಂ ಅಧಿಕಾರಿಗಳು ವಿದ್ಯುತ್ ಅಳವಡಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಪಪಂ ಕಚೇರಿಗೆ 2.2 ಲಕ್ಷ ರೂ. ವೆಚ್ಚದಲ್ಲಿ ಪೀಠೋಪಕರಣ ಖರೀದಿಸಲಾಗುವುದು. ಕಾನೂನು ಬಾಹಿರವಾಗಿ ಯಾವುದೇ ಪೀಠೋಪಕರಣ ಖರೀದಿ ನಡೆದಿಲ್ಲ. ಹಳೇ ಪೀಠೋಪಕರಣ ಸಿಬ್ಬಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಪಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಸಿದ್ರಾಮೇಶ ಬೇಲೇರಿ, ಸದಸ್ಯರಾದ ರಿಯಾಜ್ ಅಹ್ಮದ್ ಖಾಜಿ, ಅಶೋಕ ಅರಕೇರಿ, ಬಸಮ್ಮ ಬಣಕಾರ, ಶ್ರೀದೇವಿ ಗುರುವಿನ, ಕಳಕಪ್ಪ ತಳವಾರ್, ಬಸಲಿಂಗಪ್ಪ ಕೊತ್ತಲ್, ನಾಮ ನಿರ್ದೇಶನ ಸದಸ್ಯರಾದ ಸಿದ್ದಪ್ಪ ಕಟ್ಟಿಮನಿ, ಭಾಗೀರತಿ ಜೋಗಿನ್, ಇಕ್ಬಾಲ್‌ಸಾಬ್ ವಣಗೇರಿ ಇತರರಿದ್ದರು.