

ಯಲಬುರ್ಗಾ: ಮಕ್ಕಳ ಹಾಜರಾತಿ ಸುಧಾರಣೆ, ಅಪೌಷ್ಟಿಕ ನಿವಾರಣೆಗೆ ವಾರಕ್ಕೊಮ್ಮೆ ಮೊಳಕೆಕಾಳು ವಿತರಣೆ, ಶಾಲೆ ಬಿಟ್ಟ ಮಕ್ಕಳ ಸೇರ್ಪಡೆ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಕುಡಗುಂಟಿ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಗೆ ಅತ್ಯುತ್ತಮ ಶಾಲಾ ಅಭಿವೃದ್ಧಿ ಸಮಿತಿ ಪ್ರಶಸ್ತಿ ಲಭಿಸಿದೆ.
ತಾಲೂಕು ಕೇಂದ್ರದಿಂದ 9 ಕಿಮೀ ದೂರದಲ್ಲಿರುವ ಕುಡಗುಂಟಿ ಗ್ರಾಂದ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 211 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರ ಕ್ರಿಯಾಶೀಲ ಚಟುವಟಕೆಗಳಿಗೆ ಎಸ್ಡಿಎಂಸಿ ಸದಸ್ಯರ ಪ್ರೋತ್ಸಾಹದಿಂದ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿದೆ. ಶಾಲಾ ಆವರಣದಲ್ಲಿ ತೆಂಗು, ಬೇವು, ಚೆರ‌್ರಿ ಸೇರಿ ತರಹೇವಾರಿ ಗಿಡಗಳನ್ನು ನೆಟ್ಟು ಬೆಳಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ದಾನಿಗಳ ಸಹಕಾರದೊಂದಿಗೆ ವಾರಕ್ಕೊಮ್ಮೆ ಮೊಳಕೆಕಾಳು ವಿತರಿಸುವ ಕಾರ್ಯ ಆರಂಭಿಸಿ ಗಮನ ಸೆಳೆದಿತ್ತು. ಅತ್ಯುತ್ತಮ ಕಾರ್ಯನಿರ್ವಹಿಸಿದ ಫಲವಾಗಿ ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಅಂಗವಾಗಿ ಚೇತನ್ ಫೌಂಡೇಷನ್ ನೀಡುವ ರಾಜ್ಯದ 12 ಶಾಲೆಗಳ ಪೈಕಿ ಕುಡಗುಂಟಿ ಸಹಿಪ್ರಾ ಶಾಲೆ, ಎಸ್ಡಿಎಂಸಿ ಪ್ರಶಸ್ತಿಗೆ ಭಾಜನವಾಗಿದೆ.
ಕುಡಗುಂಟಿ ಸರ್ಕಾರಿ ಶಾಲೆಗೆ ಅತ್ಯುತ್ತಮ ಶಾಲಾ ಅಭಿವೃದ್ಧಿ ಸಮಿತಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ, ಸೌಲಭ್ಯ, ಗುಣಮಟ್ಟದ ಕಲಿಕೆ ಹಾಗೂ ಎಸ್ಡಿಎಂಸಿ ಸದಸ್ಯರು ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತಿರುವ ಫಲವಾಗಿ ಶಾಲೆ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಇದಕ್ಕೆ ಗ್ರಾಮಸ್ಥರ ಸಹಕಾರವೂ ಕಾರಣ.| ಶರಣಪ್ಪ ಇಟಗಿ ಮುಖ್ಯಶಿಕ್ಷಕ, ಸಹಿಪ್ರಾ ಶಾಲೆ, ಕುಡಗುಂಟಿ
ಎಸ್ಡಿಎಂಸಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಮಕ್ಕಳ ಕಲಿಕೆಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಹಸಿರೀಕರಣಕ್ಕೆ ಆದ್ಯತೆ ಕೊಡಲಾಗಿದೆ. ಶಾಲೆ ಅಭಿವೃದ್ಧಿಯಿಂದ ಎಸ್ಡಿಎಂಸಿ ಪ್ರಶಸ್ತಿಗೆ ಭಾಜನವಾಗಿರುವುದು ಖುಷಿ ನೀಡಿದೆ.| ಬಸವರಾಜ ಹೊಸಮನಿ ಎಸ್ಡಿಎಂಸಿ ಅಧ್ಯಕ್ಷ, ಸಹಿಪ್ರಾ ಶಾಲೆ ಕುಡಗುಂಟಿ