ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಕೆರೆಗಳಿಗೆ ಕೃಷ್ಣೆ ನೀರು ಹರಿಸಲು ಬದ್ಧ ಎಂದ ಸಚಿವ ಹಾಲಪ್ಪ ಆಚಾರ್

03042022 Yelburga halappa achar
Published on

ಯಲಬುರ್ಗಾ: ನೀರಾವರಿ ವಿಚಾರದಲ್ಲಿ ನನ್ನ ಬದ್ಧತೆ ಮುಂಬಬರುವ ದಿನಗಳಲ್ಲಿ ಸಾಬೀತು ಪಡಿಸುವೆ. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಕೆರೆಗಳಿಗೆ ಕೃಷ್ಣೆ ನೀರು ಹರಿಸುವೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಹಾಗೂ ಕೃಷಿ ಕ್ಷೇತ್ರ ಪವಿತ್ರವಾಗಿವೆ. ಜಗತ್ತಿಗೆ ಅನ್ನ ನೀಡುವ ರೈತನನ್ನು ಸ್ಮರಿಸಬೇಕು. ಐದಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರೈತರ ಪಹಣಿ ಸಮಸ್ಯೆ ಬಗೆಹರಿದಿದ್ದು, ಸರ್ಕಾರ ಸೌಲಭ್ಯ ಪಡೆಯಲು, ಆಸ್ತಿ ವಹಿವಾಟು ನಡೆಸಲು ಸುಗಮದಾರಿ ಕಲ್ಪಿಸಿದ ಕಂದಾಯ ಹಾಗೂ ಭೂಮಾಪನ ಇಲಾಖೆಯವರಿಗೆ ರೈತರ ಹಬ್ಬದಲ್ಲಿ ಸನ್ಮಾನಿಸಿ ಪುರಸ್ಕರಿಸಿದ್ದು ಅವರ ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ. ರೈತರಿಂದ ಅಧಿಕಾರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ಜನಮಾನಸದಲ್ಲಿ ಸದಾ ಉಳಿಯುತ್ತವೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

ರೈತರ ಗಂಭೀರ ಸಮಸ್ಯೆ ಬಗ್ಗೆ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ನವರು ಕಾಳಜಿ ವಹಿಸದೆ ಅನ್ಯಾಯ ಮಾಡಿದ್ದಾರೆ. ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿ ಕೊಡಲಾಗುವುದು ಎಂದರು.

ಕರಮುಡಿಯಿಂದ ತೊಂಡಿಹಾಳ ಹಾಗೂ ಕರಮುಡಿಯಿಂದ ಹಾಳಕೇರಿಗೆ ಸಂಪರ್ಕಿಸುವ ಮಾರ್ಗ ಮಧ್ಯೆ ಹರಿಯುವ ಹಳ್ಳಗಳಿಗೆ ಬ್ರಿಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಸಿ.ಎಚ್.ಪಾಟೀಲ್, ತಹಸೀಲ್ದಾರ್ ಶ್ರೀಶೈಲ ತಳವಾರ್, ಉಪನ್ಯಾಸಕ ಹೊನ್ನೂರ್ ಪಾಟೀಲ್ ಮಾತನಾಡಿದರು. ಹಾಳಕೇರಿಯ ಶ್ರೀಮುಪ್ಪಿನ ಬಸವಲಿಂಗ ಸ್ವಾಮೀಜಿ, ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಗೀತವ್ವ ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಹಾಯಕ ಆಯುಕ್ತ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಬಸಲಿಂಗಪ್ಪ ಭೂತೆ, ಶಿವುಕುಮಾರ ನಾಗಲಾಪುರಮಠ, ಜಿ.ಎಂ.ನಿಂಗೋಜಿ, ಶಕುಂತಲಾ ಪಾಟೀಲ್, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ಬಸನಗೌಡ ತೊಂಡಿಹಾಳ, ಸಂಗಪ್ಪ ಬಂಡಿ, ಗಿರೀಶಗೌಡ ಪಾಟೀಲ್, ರಮೇಶ ಕುರಿ, ಭೀಮಪ್ಪ ಹವಳಿ, ಈರಣ್ಣ ಹಳ್ಳಿ, ಕಳಕಪ್ಪ ಕುರಿ, ರಾಮಣ್ಣ ಪ್ರಭಣ್ಣವರ, ಶರಣಪ್ಪಗೌಡ ಪಾಟೀಲ್, ಶ್ಯಾಮಿದ್ ಮುಲ್ಲಾ, ಗಂಗಪ್ಪ ಹವಳಿ, ಬಸವರಾಜ ಉಳ್ಳಾಗಡ್ಡಿ, ಹುಚ್ಚಿರಪ್ಪ ರಾಂಪುರ, ಶಿವಪುತ್ರಪ್ಪ ಮಲಿಗೋಡದ್, ವೀರಣ್ಣ ಮಾನಶೆಟ್ಟಿ, ಮಂಜುನಾಥ, ಗೌಡಪ್ಪ ಬಲಕುಂದಿ, ಉಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net